Kodagu

ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ ವಿಫಲ : ಕೂಡಲೇ ಕೊಡಗಿಗೆ ಅರಣ್ಯ ಸಚಿವರು ಭೇಟಿ ನೀಡಲಿ : ಎಡಿಕೇರಿ ಪ್ರಸನ್ನ ಒತ್ತಾಯ

admincoorgdaily

ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ ವಿಫಲ : ಕೂಡಲೇ ಕೊಡಗಿಗೆ ಅರಣ್ಯ ಸಚಿವರು ಭೇಟಿ ನೀಡಲಿ : ಎಡಿಕೇರಿ ಪ್ರಸನ್ನ ಒತ್ತಾಯ

ಮಡಿಕೇರಿ : ಕಾಡಾನೆ ದಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಸುಮಾರು ನಾಲ್ಕು ಮಂದಿ ಸಾವನ್ನಪ್ಪಿದ್ದು, ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಮಾಜ ಸೇವಕ ಪ್ರಸನ್ನ ಎಡಿಕೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

 ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋಮವಾರ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ಮಾಜಿ ಸದಸ್ಯೆ ಜಲಜಾಕ್ಷಿ(53) ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ.

ಕಾಡಾನೆ ದಾಳಿಯಿಂದ ಕೊಡಗು ಜಿಲ್ಲೆಯಲ್ಲಿ ಜ.1ರಂದು ಶನಿವಾರಸಂತೆ ಸಮೀಪದ ಗಣಗೂರಿನಲ್ಲಿ ಪೊನ್ನಪ್ಪ(61), ಜನವರಿ 29ರಂದು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಕಾಫಿ ತೋಟದಲ್ಲಿ ಲತೀಫ್(72), ಫೆ.28ರಂದು ಮಡಿಕೇರಿ ತಾಲೂಕಿನ ಮದೆನಾಡುವಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜಾ(17) ಮೃತಪಟ್ಟಿದ್ದಾರೆ.

ಎರಡು ತಿಂಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರೂ ಕೂಡ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.ಹೀಗೆ ಮುಂದುವರೆದರೆ ಅಮಾಯಕ ಕಾರ್ಮಿಕರು ಕಾಡಾನೆ ದಾಳಿಗೆ ತುತ್ತಾಗುತ್ತಾರೆ. ಆದ್ದರಿಂದ ಆದಷ್ಟು ಕೂಡಲೇ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

      ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಸಾರ್ವಜನಿಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಸಚಿವರು ಕೊಡಗಿಗೆ ಭೇಟಿ ನೀಡಲಿ

ಕೊಡಗು ಜಿಲ್ಲೆಯಲ್ಲಿ ಕಾಡಾನೆ, ಹುಲಿ ಹಾವಳಿ ನಿರಂತರವಾಗಿ ನಡೆಯುತ್ತಿದೆ. ಕಾಡಾನೆ ದಾಳಿಯಿಂದ ಅಪಾರ ಜನರು ಸಾವನ್ನಪ್ಪುತ್ತಿದ್ದಾರೆ‌. ಹುಲಿ ದಾಳಿಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಮೃತಪಟ್ಟಿದೆ. ಹೀಗಿದ್ದರೂ ಕೂಡ ಈ ವರೆಗೆ ಕೊಡಗು ಜಿಲ್ಲೆ ಅರಣ್ಯ ಸಚಿವರು ಭೇಟಿ ನೀಡದಿರುವ ಬಗ್ಗೆ ಪ್ರಸನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರು ಆದಷ್ಟು ಬೇಗ ಕೊಡಗಿಗೆ ಭೇಟಿ ನೀಡಿ ಕಾಡಾನೆ ಹಾವಳಿ ನಿಯಂತ್ರಿಸಲು ಯೋಜನೆ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.