ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ
ಮಡಿಕೇರಿ:- ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರಿ ಶುಶ್ರೂಷಾ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭ ಅದ್ಧೂರಿಯಾಗಿ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ನಿರ್ದೇಶಕರು ನರ್ಸಿಂಗ್ ಶಿಕ್ಷಣ ವಿಭಾಗ, ವೈದ್ಯಕೀಯ ನಿರ್ದೇಶನಾಲಯ ಬೆಂಗಳೂರು ಶ್ರೀ ಶ್ರೀಕಾಂತ್ ಫುಲಾರಿ ರವರು ತಮ್ಮ ಭಾಷಣದಲ್ಲಿ 89 ವಿದ್ಯಾರ್ಥಿಗಳು ಪದವಿ ಸ್ವೀಕರಿಸುತ್ತಿರುವುದು ನನಗೆ ಹೆಮ್ಮೆಯಾಗುತ್ತಿದೆ.ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ನರ್ಸಿಂಗ್ ಶಿಕ್ಷಣ ಬೆಳೆಸುವಲ್ಲಿ ನಿಮ್ಮೆಲ್ಲರ ಪಾತ್ರ ಹೆಚ್ಚಿನದ್ದು, ನರ್ಸಿಂಗ್ ಶಿಕ್ಷಣದಿಂದ ಲಭಿಸುವ ಉದ್ಯೋಗಗಳು ಸಮಾಜದಲ್ಲಿ ಅತ್ಯಂತ ಗೌರವಾನ್ವಿತವಾಗಿವೆ ಹಾಗೂ ಸೇವಾಭಾವನೆಯ ಪ್ರತಿರೂಪವಾಗಿವೆ. ಉತ್ತಮ ನೈಪುಣ್ಯ ಮತ್ತು ಕಾಳಜಿಯ ಮನೋಭಾವದಿಂದ ರೋಗಿಗಳ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ತರಬಹುದು. ಇಂದಿನ ಯುಗದಲ್ಲಿ ನರ್ಸಿಂಗ್ ವೃತ್ತಿಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಶಿಸ್ತಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಸೇವೆ ಅನೇಕ ಕುಟುಂಬಗಳಿಗೆ ಆಶಾಕಿರಣವಾಗಲಿದೆ, ಸಮಾಜದ ಆರೋಗ್ಯ ಕಾಪಾಡುವಲ್ಲಿ ನರ್ಸಿಂಗ್ ವೃತ್ತಿದಾರರ ಪಾತ್ರ ಅತಿ ಮುಖ್ಯವಾಗಿದೆ. ನೀವು ತಾಳ್ಮೆ, ಸಮರ್ಪಣೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದೆ ಆಗುತ್ತದೆ. ನಿಮ್ಮೆಲ್ಲರೂ ದೇಶದ ಆರೋಗ್ಯ ವ್ಯವಸ್ಥೆಗೆ ಬಲವಾಗುವ ಉತ್ತಮ ನರ್ಸಿಂಗ್ ವೃತ್ತಿದಾರರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲೋಕೇಶ್ ಎ ಜೆ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಲಭಿಸಿದ್ದು ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿದರು. ಈ ಮಹತ್ವದ ಕ್ಷಣವು ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದ ಫಲವಾಗಿದೆ ಎಂದು ಅವರು ಹೇಳಿದರು.
ಇದೊಂದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವು ಆಗಿದ್ದು, ಮುಂದೆ ಉತ್ತಮ ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವ ಜವಾಬ್ದಾರಿಯೂ ನಿಮ್ಮ ಮೇಲೆ ಇದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ನರ್ಸಿಂಗ್ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸೇವಾ ಧರ್ಮವಾಗಿದ್ದು, ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಎಲ್ಲಾ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ, ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಂಜುಳ ಎ ಕೆ ಕಳೆದ ನಾಲ್ಕು ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಉಲ್ಲೇಖಿಸಿ ಕಾಲೇಜು ವರದಿ ವಾಚಿಸಿ ತಮ್ಮ ಸ್ಫೂರ್ತಿಯುತ ಮಾತುಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಪದವೀಧರರಿಗೆ ಶುಭ ಹಾರೈಸಿದರು
ಕಾರ್ಯಕ್ರಮವನ್ನು ಸರ್ಕಾರಿ ಶುಶ್ರೂಷಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಶ್ರೀ ಗುರುಪಾದ ಕೆ ಪಿ ರವರು ನೆರೆದಿರುವ ಸರ್ವ ಅತಿಥಿಗಳನ್ನು ಸ್ವಾಗತಿಸಿ, ನರ್ಸಿಂಗ್ ಶಿಕ್ಷಣವು ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದು ಕೇವಲ ವೃತ್ತಿಯಲ್ಲ, ಸೇವಾಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಹಾನ್ ಕ್ಷೇತ್ರವಾಗಿದೆ. ನರ್ಸಿಂಗ್ ಶಿಕ್ಷಣದಿಂದ ವಿದ್ಯಾರ್ಥಿಗಳು ನಿಪುಣತೆ ಮತ್ತು ಕರ್ತವ್ಯನಿಷ್ಠೆಯನ್ನು ಹೊಂದಿ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಾರೆ ಎಂದು ಹಿತನುಡಿಗಳನ್ನಾಡಿದರು.
ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಕುಮಾರಿ ಆಶಿತಾ ಪ್ರಾರ್ಥನೆಯನ್ನು ನೆರವೇರಿಸಿದರು, ಗಣ್ಯಾತಿಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಹಾಯಕ ನಿರ್ದೇಶಕರು ನರ್ಸಿಂಗ್ ಶಿಕ್ಷಣ ವಿಭಾಗ ವೈದ್ಯಕೀಯ ನಿರ್ದೇಶನಾಲಯ ಬೆಂಗಳೂರು ಶ್ರೀ ಶ್ರೀಕಾಂತ್ ಫುಲಾರಿ ರವರು ಪ್ರತಿಜ್ಞೆ ಯನ್ನು ಬೋಧಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ ವಿಶಾಲ್ ಕುಮಾರ್ ರವರು ತಮ್ಮ ಭಾಷಣದಲ್ಲಿ ಇದು ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ದಾರಿ ತೆರೆದಿಡುವ ಮಹತ್ವದ ಕ್ಷಣವಾಗಿದೆ. ಸಮಾಜದ ಸೇವೆಗೆ ನೀವು ಸಜ್ಜಾಗಿರುವ ಈ ಸಂದರ್ಭದಲ್ಲಿ ನಿಮ್ಮ ಜ್ಞಾನ ಮತ್ತು ನಿಷ್ಠೆ ಜನರಿಗೆ ಬೆಳಕಾಗಲಿ ಎಂಬುದು ನಮ್ಮ ಹಾರೈಕೆ. ನೀವು ಗಳಿಸಿರುವ ವಿದ್ಯೆ ಕೇವಲ ನಿಮ್ಮದೇ ಸಾಧನೆಯಲ್ಲ, ಅದು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಶಕ್ತಿಯಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಕರ್ತವ್ಯನಿಷ್ಠೆ ಮತ್ತು ಮಾನವೀಯತೆ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಅಭಿನಂದನ್ ಬಿ ವಂದಕುದರಿ ರವರು ತಮ್ಮ ಭಾಷಣದಲ್ಲಿ, ಇದು ಕೇವಲ ವಿದ್ಯಾರ್ಥಿಗಳ ಸಂಭ್ರಮವಷ್ಟೇ ಅಲ್ಲ, ನಮ್ಮ ಸಂಸ್ಥೆಯ ಹೆಮ್ಮೆಯ ಪ್ರತೀಕವಾಗಿದೆ ಎಂದು ಹೇಳಿದರು. ಆತ್ಮವಿಶ್ವಾಸವನ್ನು ಹೆಚ್ಚಿಸಿ, ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲು ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕಾರ್ಯಕ್ರಮವಕ್ಕೆ ಶುಭ ಹಾರೈಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಧನಂಜಯ್ ಕುಮಾರ್ ರವರು ತಮ್ಮ ಭಾಷಣದಲ್ಲಿ ನರ್ಸಿಂಗ್ ಕೇವಲ ಶಿಕ್ಷಣ ಅಲ್ಲ, ಇದೊಂದು ತ್ಯಾಗಮಯ ಸೇವೆಯಾಗಿದೆ ಎಂದು ಹೇಳಿದರು. ರೋಗಿಗಳಿಗೆ ನಿಮ್ಮ ಚಿಕಿತ್ಸೆಗೆಗಿಂತ ಹೆಚ್ಚಾಗಿ ನಿಮ್ಮ ಕಾಳಜಿ ಮತ್ತು ಪ್ರೀತಿ ಮುಖ್ಯವಾಗುತ್ತದೆ. ವೈದ್ಯರು ರೋಗವನ್ನು ಗುಣಪಡಿಸಿದರೆ, ನರ್ಸ್ ರೋಗಿಯ ಮನಸ್ಸನ್ನೇ ಬದಲಾಯಿಸುತ್ತಾರೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತುರ್ತು ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಅಪ್ಪಾಜಿ ರವರು ತಮ್ಮ ಭಾಷಣದಲ್ಲಿ ಇಂದು ನೀವು ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಸ್ವೀಕರಿಸಿದ ನಿಮಗೆ ಮುಂದಿನ ಭವಿಷ್ಯ ಉಜ್ವಲವಾಗಿ ಎಂದು ಶುಭ ಹಾರೈಸಿದರು. ನಿಮ್ಮ ಪರಿಶ್ರಮ, ನಿಷ್ಠೆ ಮತ್ತು ಸಂಕಲ್ಪವು ನಿಮಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ತಂದುಕೊಡಲಿ ಎಂದು ಅವರು ಆಶಿಸಿದರು. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದಲ್ಲಿ ರಾಂಕ್ ಪಡೆದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವವಿಸಲಾಯಿತು.
ಘಟಿಕೋತ್ಸವ ಸಮಾರಂಭ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ರೋಹಿಣಿ ಕೆ ಎಂ, ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ದೀಪರಾಜ್ ಸಿ ಎಂ, ಸಹ ಪ್ರಾಧ್ಯಾಪಕರಾದ ಶ್ರೀ ಮಾರ್ಟಿನ್ ಲೂಥರ್ ಕಿಂಗ್, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಂಜಿನಿ ಎಸ್ ಎನ್, ಶ್ರೀಮತಿ ಅಶ್ವಿನಿ ಕೆ ಎನ್ ಉಪನ್ಯಾಸಕರಾದ ಶ್ರೀಮತಿ ಗೀತಾ ಕೆ ಬಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ನರ್ಸಿಂಗ್ ಮೇಲ್ವಿಚಾರಕರಾದ ಮಹೇಶ್
ಹಾಗೂ ಇನ್ನಿತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಕುಮಾರಿ ಜಿಸ್ಟಿ ಮತ್ತು ರಮ್ಯಾ ನಿರೂಪಿಸಿದರು, ಸರ್ಕಾರಿ ಶುಶ್ರೂಷಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅಶ್ವಿನಿ ಕೆ ಎನ್ ವಂದನಾರ್ಪಣೆ ಸಮರ್ಪಿಸಿದರು, ಕೊನೆಗೆ ವಿಧ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಗಳು ನಡೆಯಿತು.