ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಗೆ ಹಸಿರು ನಿಶಾನೆ 17 ಅಂಶಗಳ ಸುರಕ್ಷತಾ ಮಾರ್ಗಸೂಚಿ ಜಾರಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಗೆ ಹಸಿರು ನಿಶಾನೆ  17 ಅಂಶಗಳ ಸುರಕ್ಷತಾ ಮಾರ್ಗಸೂಚಿ ಜಾರಿ

ಬೆಂಗಳೂರು, ಡಿ. 19: ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಗೃಹ ಇಲಾಖೆ ಅನುಮತಿ ನೀಡಿದೆ. ಗೃಹ ಇಲಾಖೆಯ ಸೂಚನೆಯ ಮೇರೆಗೆ ಬೆಂಗಳೂರು ಪೊಲೀಸರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ 17 ಅಂಶಗಳ ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಪೂರ್ಣವಾಗಿ ಅನುಷ್ಠಾನಗೊಳಿಸಿದ ಬಳಿಕ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದ ಘಟನೆ ಹಿನ್ನೆಲೆಯಲ್ಲಿ ಸ್ಟೇಡಿಯಂನಲ್ಲಿ ಪಂದ್ಯಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆ ನ್ಯಾ. ಮೈಕಲ್ ಡಿ. ಕುನ್ಹಾ ಸಮಿತಿ ವರದಿಯ ಶಿಫಾರಸುಗಳನ್ನು ಆಧರಿಸಿ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೃಹ ಇಲಾಖೆ ಸಿದ್ಧಪಡಿಸಿರುವ ಷರತ್ತುಗಳ ಕುರಿತು ಕೆಎಸ್‌ಸಿಎ ಪದಾಧಿಕಾರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲು ನಿರ್ಧರಿಸಿದ್ದಾರೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡ ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಿದೆ. ಮಾರ್ಗಸೂಚಿಗಳನ್ನು ಈಡೇರಿಸಿದ ನಂತರವೇ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅಧಿಕೃತ ಅನುಮತಿ ನೀಡಲಾಗುವುದು ಎಂದು ತಿಳಿದುಬಂದಿದೆ.

ಪ್ರಮುಖ ಷರತ್ತುಗಳು

ಸ್ಟೇಡಿಯಂ ಒಳಗೆ ಮತ್ತು ಹೊರಗೆ ಪ್ರವೇಶ–ನಿರ್ಗಮನ ವ್ಯವಸ್ಥೆಗಳನ್ನು ಸುಧಾರಿಸುವುದು ಪ್ರಮುಖ ಷರತ್ತುಗಳಲ್ಲೊಂದು. ಟಿಕೆಟ್ ವಿತರಣೆ ಮತ್ತು ಪ್ರೇಕ್ಷಕರ ಸಾಲುಗಳು ಸಾರ್ವಜನಿಕ ಫುಟ್‌ಪಾತ್‌ಗಳ ಮೇಲೆ ನಡೆಯದಂತೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರ ಓಡಾಟ ಹಾಗೂ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಸ್ಟೇಡಿಯಂನ ಎಲ್ಲ ಪ್ರವೇಶ ದ್ವಾರಗಳನ್ನು ಕನಿಷ್ಠ ಆರು ಅಡಿ ಅಗಲಕ್ಕೆ ವಿಸ್ತರಿಸಬೇಕು. ಅಗ್ನಿಶಾಮಕ ಸುರಕ್ಷತೆಗಾಗಿ ಪ್ರತ್ಯೇಕ ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಸ್ಟೇಡಿಯಂ ಪ್ರವೇಶಿಸುವ ಪ್ರೇಕ್ಷಕರ ಸಂಖ್ಯೆಯನ್ನು ನೈಜ ಸಮಯದಲ್ಲಿ ಲೆಕ್ಕಿಸುವ ವ್ಯವಸ್ಥೆ ಜಾರಿಗೆ ತರಬೇಕು.

ಇದಲ್ಲದೆ, ಸ್ಟೇಡಿಯಂ ಸುತ್ತಲಿನ ಪಾರ್ಕಿಂಗ್ ವ್ಯವಸ್ಥೆ, ಪಿಕ್‌ಅಪ್–ಡ್ರಾಪ್ ವ್ಯವಸ್ಥೆ ಸುಧಾರಿಸುವುದು ಹಾಗೂ ಟಿಕೆಟ್ ವಿತರಣೆಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸುವುದನ್ನು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸುಮಾರು ಎರಡು ತಿಂಗಳು ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. ಎಲ್ಲ ಕಾಮಗಾರಿಗಳು ಸಮಯಕ್ಕೆ ಪೂರ್ಣಗೊಂಡಲ್ಲಿ, ಮಾರ್ಚ್ ವೇಳೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಸೇರಿದಂತೆ ವಿವಿಧ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವ ಸಾಧ್ಯತೆ ಇದೆ.