30 ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲು ನಿಗದಿ:ಹೈಕೋರ್ಟ್ ಗೆ ಮಾಹಿತಿ ನೀಡಿದ ಸರ್ಕಾರ

30 ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲು ನಿಗದಿ:ಹೈಕೋರ್ಟ್ ಗೆ ಮಾಹಿತಿ ನೀಡಿದ ಸರ್ಕಾರ

ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ; ರಾಜ್ಯದ 5950 ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಆಡಳಿತಾಧಿಕಾರಿಗಳ ನೇಮಕಗೊಂಡು,ಅಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದಾರೆ.

 ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಯನ್ನು ಸರ್ಕಾರ‌ ಅಂತಿಮಗೊಳಿಸಿದ್ದು,ಈ ಸದಸ್ಯ ಸ್ಥಾನಗಳಿಗೆ ‌ಪ್ರವರ್ಗವಾರು ಮೀಸಲನ್ನು 30 ದಿನಗಳಲ್ಲಿ ‌ನಿಗದಿಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ಶುಕ್ರವಾರ ಮಾಹಿತಿ ನೀಡಿದೆ.

ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸದಸ್ಯರ ಸಂಖ್ಯೆ ನಿರ್ಧರಿಸಲಾಗಿದೆ. ಎಲ್ಲ ಸದಸ್ಯ ಸ್ಥಾನಗಳಿಗೆ ಪ್ರವರ್ಗವಾರು ಮೀಸಲಾತಿ ನಿಗದಿಪಡಿಸುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, 30 ದಿನಗಳಲ್ಲಿ ಮೀಸಲಾತಿ ನಿಗದಿಪಡಿಸುವಂತೆ ನಿರ್ದೇಶಿಸಲಾಗಿದೆ.

ಈ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅವಧಿ ಮುಗಿದಿರುವ ರಾಜ್ಯದ 5,950 ಗ್ರಾಮ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಪೂರಕವಾಗಿ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಮುಂದಿನ ವಿಚಾರಣೆಯನ್ನು ‌ಜುಲೈ 10 ಕ್ಕೆ ಮುಂದೂಡಲಾಗಿದದೆ.

ರಾಜ್ಯದ ಎಲ್ಲಾ ಗ್ರಾಮ‌ ಪಂಚಾಯಿತಿಗಳಿಗೆ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿ ಅಂತಿಮ ಅಧಸೂಚನೆ ಹೊರಡಿಸಲಾಗಿದೆ. ಈ ಸದಸ್ಯ ಸ್ಥಾನಗಳಿಗೆ ಪ್ರವರ್ಗವಾರು ಮೀಸಲನ್ನು 30 ದಿನಗಳಲ್ಲಿ ನಿಗದಿಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಪ್ರತಿಮಾ ಹೊನ್ನಾಪುರ, ಹೆಚ್ಚುವರಿ ಅಡ್ವೊಕೇಟ್ ಜನರಲ್