Kodagu

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

admincoorgdaily

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

ಮಡಿಕೇರಿ:-ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ನಗರದ ತಾ.ಪಂ.ಸಾಮಥ್ರ್ಯ ಸೌಧದಲ್ಲಿ ಶನಿವಾರ ನಡೆಯಿತು.  

ರಾಜ್ಯ ಸರ್ಕಾರದ ಐದು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಆರ್ಥಿಕ ನೆರವು ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿರುವ ಹಾಗೂ ಸಾಮಾಜಿಕ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಹಿಳಾ ಫಲಾನುಭವಿಗಳನ್ನು ಗುರುತಿಸಿ ಸನ್ಮಾನಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಗೃಹಲಕ್ಷ್ಮಿ ಯೋಜನೆಯ ಧನಸಹಾಯದ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಯಾಗಿ ಸಮಾಜದಲ್ಲಿ ಸಕ್ರಿಯರಾಗಿರುವ ಫಲಾನುಭವಿಗಳ ಯಶೋಗಾಥೆಗಳ ವರದಿ, ವಿಡಿಯೋ ಚಿತ್ರೀಕರಣ, ಛಾಯಾಚಿತ್ರ ಅವರ ಅನಿಸಿಕೆಗಳು ಹಾಗೂ ಸ್ವಯಂ-ವಿವರಗಳನ್ನು ಕಚೇರಿಗೆ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಯಿತು.

 ಶಿಶುಅಭಿವೃದ್ದಿ ಇಲಾಖೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೇ ಮಾಹೆಯವರೆಗೆ ಧನ ಸಹಾಯ ಪಾವತಿ ಮಾಡಲಾಗಿದ್ದು, ಪ್ರಸ್ತುತ ಜೂನ್ ಮಾಹೆಯವರೆಗೆ ಧನ ಸಹಾಯ ಪಾವತಿಯಾಗಿರುತ್ತದೆ ಎಂದರು. 

ಆಹಾರ ಶಾಖೆಯಿಂದ ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಗ್ರಾಮವಾರು ಮಾಹಿತಿ ಪಡೆದು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮರಣ ಹೊಂದಿದ ಫಲಾನುಭವಿಗಳ ಮರಣ ದೃಡೀಕರಣ ಪಡೆದು ಲಾಗಿನ್ ಇಂದ ಡಿಲೀಟ್ ಮಾಡಲಾಗುತ್ತಿದೆ. ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 171 ಮರಣ ಫಲಾನುಭವಿಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಸಮಿತಿ ಸದಸ್ಯ ಪ್ರಭು ರೈ ಅವರು ಮಾತನಾಡಿ, ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಗ್ರಾ.ಪಂ.ಗಳಿಂದ ಮರಣ ದೃಢೀಕರಣ ವಿತರಿಸುವ ಬಗ್ಗೆ ಪ್ರತಿ ತಿಂಗಳು ಮಾಹಿತಿ ಪಡೆದು ಪರಿಶೀಲಿಸಿ ಗೃಹಲಕ್ಷ್ಮಿ ಫಲಾನುಭವಿ ಮರಣ ಹೊಂದಿದ್ದರೆ ಇವರ ಮರಣ ದೃಢಿಕರಣ ಪತ್ರ, ಆಧಾರ್ ಕಾರ್ಡ್ ಪಡೆದುಕೊಂಡು ಮರಣ ಹೊಂದಿದವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುವುದನ್ನು ಸ್ಧಗಿತಗೊಳಿಸಿ, ಈ ಕುಟುಂಬದ ಅರ್ಹ ಮಹಿಳಾ ಸದಸ್ಯರು ಇದ್ದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕ್ರಮವಹಿಸುವಂತೆ ತಿಳಿಸಿದರು.  

ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ ಮಂಜುನಾಥ್ ಅವರು ಮಾಹಿತಿ ನೀಡಿ ಯುವನಿಧಿ ಯೋಜನೆಯ ನಿಯಮದಂತೆ ನಿರುದ್ಯೋಗಿಗಳು ಪ್ರತಿ ತಿಂಗಳ 25 ನೇ ತಾರೀಖಿನೊಳಗೆ ಸ್ವಯಂ ಘೋಷಣೆ ನೀಡಿದಲ್ಲಿ ಮಾತ್ರ ಡಿಬಿಟಿ ಪಾವತಿಯಾಗುತ್ತದೆ. ಮುಖ್ಯ ಕಚೇರಿಯಿಂದ ಸ್ವೀಕೃತವಾದ ಜೂನ್-2026 ರ ಡಿಬಿಟಿ ದತ್ತಾಂಶವು ಕೊಡಗು ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 626 (616 ಪದವೀಧರರು, 10 ಡಿಪ್ಲೋಮಾ) ಫಲಾನುಭವಿಗಳು ಮಾತ್ರ ಡಿಬಿಟಿಗೆ ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು. 

ಬಹುತೇಕ ಫಲಾನುಭವಿಗಳಿಗೆ ಡಿಬಿಟಿ' ಆಗದಿರಲು ಪ್ರಮುಖ ಕಾರಣವೆಂದರೆ 472 ಫಲಾನುಭವಿಗಳು ಮಾಸಿಕ ಸ್ವಯಂ ಘೋಷಣೆ ನೀಡಿರುವುದಿಲ್ಲ. ಮುಖ್ಯ ಕಚೇರಿಯ ದತ್ತಾಂಶದಂತೆ ಫಲಾನುಭವಿಗಳು ತಾವು ಉದ್ಯೋಗದಲ್ಲಿರುವುದಾಗಿ ಸ್ವಯಂ ಘೋಷಣೆ ಮಾಡಿದ್ದಾರೆ. ಇನ್ನು 166 ಅರ್ಜಿಗಳನ್ನು ಭೌತಿಕ ಪರಿಶೀಲನೆ ವೇಳೆ ತಿರಸ್ಕರಿಸಲಾಗಿದೆ ಎಂದರು. 

ಸಮಿತಿ ಸದಸ್ಯರಾದ ಫ್ಯಾನ್ಸಿ ಪಾರ್ವತಿ ಅವರು ಮಾತನಾಡಿ, ಮುಕ್ಕೋಡ್ಲು ಭಾಗಕ್ಕೆ ಹಳೇಯ ಬಸ್‍ಗಳು ಬರುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ. ಆದ್ದರಿಂದ ನೂತನ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು.

ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಬಸ್ ಚಾಲಕರು ಸಮಯ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಗೃಹಜ್ಯೋತಿ ಯೋಜನೆಯ ಇಲಾಖಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಶೇ.98.81 ರಷ್ಟು ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.  

ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರು ಮಾತನಾಡಿ, ಸರ್ವರ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ, ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು.

ಆಹಾರ ನಿರೀಕ್ಷಕರಾದ ವೀಣಾ ಅವರು ಮಾತನಾಡಿ, ಸೆಪ್ಟೆಂಬರ್ 1 ರಿಂದ 15ರ ವರೆಗೆ ಅಭಿಯಾನ ನಡೆಯಲಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಸದಸ್ಯರ ಹೆಸರು ಸೇರ್ಪಡೆ, ವರ್ಗಾವಣೆ ಮಾಡುವ ಪ್ರಕ್ರೀಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ರಂಗಪ್ಪ, ಮಿಟ್ಟು ಸೋಮಯ್ಯ, ಪೆರುಮುಂಡ ಮನು ಪೆರಾಜೆ, ದಯಾನಂದ ಮರಗೋಡು , ತಾಲ್ಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖರ್ ಇದ್ದರು.