ಹಾಸನ | ಕೋಟ್ಯಂತರ ರೂ. ವಂಚಿಸಿದ ಟೈಲರಮ್ಮ: ಚೀಟಿ ಹೆಸರಿನಲ್ಲಿ ಕೋಟಿ ಬೆಲೆಬಾಳುವ ಆಸ್ತಿ : ಹಣ ದುಪ್ಪಟ್ಟು ಮಾಡಿ ಕೊಡುವ ಆಮಿಷ

Oct 27, 2025 - 20:06
 0  1.3k
ಹಾಸನ | ಕೋಟ್ಯಂತರ ರೂ. ವಂಚಿಸಿದ ಟೈಲರಮ್ಮ:  ಚೀಟಿ ಹೆಸರಿನಲ್ಲಿ ಕೋಟಿ ಬೆಲೆಬಾಳುವ ಆಸ್ತಿ : ಹಣ ದುಪ್ಪಟ್ಟು ಮಾಡಿ ಕೊಡುವ ಆಮಿಷ

ಹಾಸನ, ಅ. 27: ಹಾಸನ ನಗರದಲ್ಲಿ ಮಹಿಳೆಯರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಲೇಡೀಸ್ ಟೈಲರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕೊಡಚಾದ್ರಿ ಚೀಟಿಯಲ್ಲಿ ಹಣ ಹೂಡಿಕೆ ಮಾಡಿದ್ದೇನೆಂದು ನಂಬಿಸಿ, ಕೆಲವೇ ತಿಂಗಳಲ್ಲಿ ದುಪ್ಪಟ್ಟು ಲಾಭ ಕೊಡುತ್ತೇನೆಂಬ ಭರವಸೆಯ ಮೂಲಕ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಅರಳಿಪೇಟೆ ರಸ್ತೆಯಲ್ಲಿರುವ ‘ಜ್ಯೋತಿ ಡ್ರೆಸ್ ಮೇಕರ್ಸ್’ ಅಂಗಡಿಯ ಮಾಲಕಿ ಹೇಮಾವತಿ ಕಳೆದ ಹಲವು ವರ್ಷಗಳಿಂದ ಮಹಿಳೆಯರ ವಸ್ತ್ರ ಹೊಲಿಸುವ ಕೆಲಸ ಮಾಡುತ್ತಿದ್ದಳು. ಗ್ರಾಹಕರೊಂದಿಗೆ ಆಪ್ತ ಪರಿಚಯ ಹೊಂದಿದ್ದ ಆಕೆ, ಅದನ್ನೇ ಸದುಪಯೋಗಪಡಿಸಿಕೊಂಡು ಸುಮಾರು 3 ಕೋಟಿ ರೂ. ವಂಚಿಸಿದ ಆರೋಪ ಕೇಳಿಬಂದಿದೆ.

ಹೇಮಾವತಿ “ಕೊಡಚಾದ್ರಿ ಚೀಟ್ಸ್‌ನಲ್ಲಿ 1 ಕೋಟಿ ರೂ. ಹೂಡಿಕೆ ಮಾಡಿದ್ದೇನೆ, ಕೆಲವೇ ತಿಂಗಳಲ್ಲಿ ದುಪ್ಪಟ್ಟು ಹಣ ಬರುತ್ತದೆ” ಎಂದು ನಕಲಿ ಚೀಟಿ ಸ್ಲಿಪ್‌ಗಳನ್ನು ತೋರಿಸುತ್ತಿದ್ದಳು. ತನ್ನ ಮಗಳನ್ನು ವಿದೇಶಕ್ಕೆ ಓದಲು ಕಳುಹಿಸಬೇಕೆಂದು, ಹೊಸ ಮನೆ ಖರೀದಿಸಲು ಹಣ ಬೇಕೆಂದು ಹೇಳಿ ಮಹಿಳೆಯರ ಬಳಿ ಹಣ ಕೇಳುತ್ತಿದ್ದಳು.

ಆಕೆಯ ಮಾತಿಗೆ ಮರುಳಾದ ಮಹಿಳೆಯರು ತಮ್ಮ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ರೂ. ನೀಡಿದ್ದರು. ಕೆಲವರು 45 ಲಕ್ಷ ರೂ.ವರೆಗೆ ನೀಡಿದ್ದರೆಂಬ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಹೇಮಾವತಿ 16 ಲಕ್ಷ ರೂ. ಮೌಲ್ಯದ ಕಾರು ಹಾಗೂ ಕೋಟಿ ರೂ. ಬೆಲೆ ಬಾಳುವ ಮನೆ ಖರೀದಿಸಿದ್ದಾಳೆ ಎಂಬುದೂ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ವಂಚನೆ ಬಯಲಾಗಿ, ನೊಂದ ಮಹಿಳೆಯರು ನಡುರಸ್ತೆಯಲ್ಲೇ ಹೇಮಾವತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರ ವಿರುದ್ಧವೇ ಹೇಮಾವತಿ ದೂರು ದಾಖಲಿಸಿರುವುದ್ದಾರೆ ಎಂದು ತಿಳಿದು ಬಂದಿದೆ.

ಹೇಮಾವತಿಯ ಪತಿ ವಿರೂಪಾಕ್ಷಪ್ಪ ಕೂಡಾ ವಂಚನೆ ಯತ್ನದಲ್ಲಿ ಭಾಗಿಯಾಗಿದ್ದಾನೆಂಬ ಶಂಕೆ ವ್ಯಕ್ತವಾಗಿದೆ. ಇಬ್ಬರನ್ನೂ ವಿಚಾರಣೆಗಾಗಿ ಪೊಲೀಸರು ಕರೆಯಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಾಸನ ನಗರ ಪೊಲೀಸ್ ಠಾಣೆ ಹಾಗೂ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮಹಿಳೆಯರಿಂದ ಬಂದ ದೂರುಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1