ಹಾಸನ: ಮೂರು ಬಾರಿ ಅರವಳಿಕೆ ಮದ್ದಿಗೂ ಬಗ್ಗದ ಕಾಡುಕೋಣ ಕೊನೆಗೂ ಸೆರೆ
ಚನ್ನರಾಯಪಟ್ಟಣ, ಅ. 12: ಮಲೆನಾಡು ಪ್ರದೇಶದಿಂದ ಬಯಲುಸೀಮೆಯತ್ತ ವಲಸೆ ಹೋದ ಕಾಡುಕೋಣ ಪಟ್ಟಣ ಪ್ರದೇಶಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಮೂರು ಬಾರಿ ಅರವಳಿಕೆ ಮದ್ದು ನೀಡಿದ ಬಳಿಕ ಅರಣ್ಯ ಇಲಾಖೆಯ ತಂಡವು ಕೋಣವನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ.
ಚನ್ನರಾಯಪಟ್ಟಣದ ಕುವೆಂಪುನಗರ, ರಾಮಕೃಷ್ಣ ಲೇಔಟ್ ಹಾಗೂ ಜನತಾ ಹೌಸ್ ಬಳಿಯ ಕುರುಚಲು ಗಿಡಗಳಲ್ಲಿ ಆಶ್ರಯ ಪಡೆದಿದ್ದ ಈ ಕಾಡುಕೋಣ ಮಡಿಕೇರಿಯಿಂದ ಆಗಮಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗಿನಿಂದಲೇ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಕಾರ್ಯಾಚರಣೆ ತೀವ್ರಗೊಂಡಿತ್ತು.
ಉಪವಲಯಾಧಿಕಾರಿ ಖಲಂದರ್ ಅವರ ನೇತೃತ್ವದಲ್ಲಿ ಚಿಕ್ಕಮಗಳೂರಿನ ಪಶುವೈದ್ಯ ಡಾ. ಆದರ್ಶ್, ಬಂಡೀಪುರದ ಪಶುವೈದ್ಯ ಡಾ. ವಸೀಂ ಹಾಗೂ ಶಾರ್ಪ್ ಶೂಟರ್ ಅಕ್ರಂ ಪಾಷ ಸೇರಿ ಒಟ್ಟು 9 ವಲಯಗಳ ಅಧಿಕಾರಿಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರು. ಶನಿವಾರ ಮಧ್ಯಾಹ್ನದ ವೇಳೆಗೆ ನಡೆದ ದೀರ್ಘವಾದ ಈ ಆಪರೇಷನ್ ಬಳಿಕ ಕಾಡುಕೋಣವನ್ನು ಬಲೆ ಹಾಕಿ ಸೆರೆ ಹಿಡಿಯಲಾಯಿತು.
ಆದರೆ ಸೆರೆಹಿಡಿದ ನಂತರ ಕೋಣ ಅರವಳಿಕೆಯ ಪರಿಣಾಮದಿಂದ ಚೇತರಿಸಿಕೊಂಡು ಲಾರಿಯಿಂದ ಜಿಗಿದ ಘಟನೆ ನಡೆಯಿತು. ಸ್ಥಳದಲ್ಲಿದ್ದ ಜನರು ಭಯಭೀತರಾಗಿ ಚದುರಿಹೋದರು. ಅಕ್ರಂ ಪಾಷ ತಕ್ಷಣ ಅರವಳಿಕೆ ಬಂದೂಕಿನಿಂದ ಮತ್ತೆ ಮದ್ದು ಹಾರಿಸಿದರೂ ಕೋಣ ಮತ್ತೊಮ್ಮೆ ಮೈಕೊಡವಿಕೊಂಡು ಓಡಿಹೋಯಿತು. ಕೊನೆಗೆ ಮೂರನೇ ಬಾರಿ ನೀಡಿದ ಅರವಳಿಕೆ ಮದ್ದಿನ ಪರಿಣಾಮದಿಂದ ಅದು ನಿತ್ರಾಣಗೊಂಡು ಬಿದ್ದುಬಿಟ್ಟಿತು. ಬಳಿಕ ಕ್ರೇನ್ ಸಹಾಯದಿಂದ ಲಾರಿಗೆ ತುಂಬಿ ಪಶ್ಚಿಮಘಟ್ಟದ ಕಾಡಿಗೆ ಸ್ಥಳಾಂತರಿಸಲಾಯಿತು.
ಕಾರ್ಯಾಚರಣೆಯ ವೇಳೆ ಶಾಂತಮ್ಮ ಎಂಬ ಮಹಿಳೆ ಕೋಣದ ದಾಳಿಗೆ ಒಳಗಾಗಿ ಪಕ್ಕೆಲುಬು ಮುರಿದು ಎಡಕಾಲು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ.
ಘಟನೆಯ ಕುರಿತು ಮಾತನಾಡಿದ ಉಪವಲಯಾಧಿಕಾರಿ ಖಲಂದರ್, “ಕಾಡುಕೋಣ ಇದೇ ಮೊದಲ ಬಾರಿಗೆ ಚನ್ನರಾಯಪಟ್ಟಣದ ಬಯಲುಸೀಮೆ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಬಾಗೂರು ರಸ್ತೆಯ ಮೂಲಕ ಪಟ್ಟಣ ಪ್ರವೇಶಿಸಿದ ಬಳಿಕ ಬೆಳಗ್ಗೆ 6.15ರ ಸುಮಾರಿಗೆ ಮಹಿಳೆಗೆ ತಿವಿದ ಘಟನೆ ಸಂಭವಿಸಿತು. ಬೆಳಗ್ಗೆ 6.45ಕ್ಕೆ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಮೂರು ಬಾರಿ ಅರವಳಿಕೆ ಮದ್ದು ನೀಡಿ ಕೊನೆಗೂ ಕೋಣವನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು,” ಎಂದರು.