ಹಾವೇರಿ | ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರು ಮೃತ್ಯು

Oct 23, 2025 - 20:23
 0  1.2k
ಹಾವೇರಿ | ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರು ಮೃತ್ಯು
ಸಾಂದರ್ಭಿಕ ಚಿತ್ರ

ಹಾವೇರಿ, ಅ. 23: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ವಿವಿಧೆಡೆ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ವಿಭಿನ್ನ ಘಟನೆಗಳಲ್ಲಿ ಮೂವರು ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ.

ಮೃತರನ್ನು ಚಂದ್ರಶೇಖರ ಕೋಡಿಹಳ್ಳಿ (75), ಘನಿಸಾಬ್ (75) ಮತ್ತು ಭರತ್ (22) ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಂಗಳವಾರ ಮೃತಪಟ್ಟಿದ್ದರೆ, ಗುರುವಾರ ಮತ್ತೊಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬ ವೀಕ್ಷಿಸಲು ತೆರಳಿದ್ದ ಭರತ್ (22) ಎಂಬ ಯುವಕನನ್ನು ಹೋರಿ ತಿವಿದ ಪರಿಣಾಮ ಆತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ದಾನೇಶ್ವರಿ ನಗರದ ನಿವಾಸಿ ಹಾಗೂ ಹೆಸ್ಕಾಂ ನಿವೃತ್ತ ನೌಕರರಾದ ಚಂದ್ರಶೇಖರ ಕೋಡಿಹಳ್ಳಿ ಅವರು ನಿನ್ನೆ ಸಂಜೆ ಮನೆಗೆ ತೆರಳುತ್ತಿದ್ದ ವೇಳೆ ಬರೋಡಾ ಬ್ಯಾಂಕ್ ಎದುರು ಅಖಾಡಾದಿಂದ ತಪ್ಪಿಸಿ ಬಂದಿದ್ದ ಹೋರಿ ಹಾಯ್ದು ಗಂಭೀರವಾಗಿ ಗಾಯಗೊಳಿಸಿತು. ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಇದೇ ರೀತಿ ದೇವಿಹೊಸೂರು ಗ್ರಾಮದಲ್ಲಿಯೂ ಹೋರಿ ಅಖಾಡದಿಂದ ತಪ್ಪಿಸಿಕೊಂಡು ಸಮೀಪದ ಮನೆಗೆ ನುಗ್ಗಿದ ಪರಿಣಾಮ ಕಟ್ಟೆಯ ಮೇಲೆ ಕುಳಿತಿದ್ದ ಘನಿಸಾಬ್ (75) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿಯೂ ಹೋರಿ ಅಖಾಡದಿಂದ ಪಾರಾಗಿ ಮನೆಗೆ ನುಗ್ಗಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಮನೆಯವರು ತಕ್ಷಣ ಎಚ್ಚರಗೊಂಡು ಹೊರಗೆ ಓಡಿಹೋದ ಕಾರಣ ದೊಡ್ಡ ಅನಾಹುತ ತಪ್ಪಿದೆ. 

ಈ ಘಟನೆಗಳ ಹಿನ್ನೆಲೆಯಲ್ಲಿ ಹಾವೇರಿ ಗ್ರಾಮಾಂತರ ಮತ್ತು ಬ್ಯಾಡಗಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0