ಚೆಯ್ಯಂಡಾಣೆ ಹಿಂದೂ ಸಂಗಮ ಆಯೋಜನ ಸಮಿತಿ ಮಂಡಲದ ವತಿಯಿಂದ ಹಿಂದೂ ಸಂಗಮ ಅದ್ಧೂರಿ ಶೋಭಾಯಾತ್ರೆ

ಚೆಯ್ಯಂಡಾಣೆ ಹಿಂದೂ ಸಂಗಮ ಆಯೋಜನ ಸಮಿತಿ ಮಂಡಲದ ವತಿಯಿಂದ ಹಿಂದೂ ಸಂಗಮ ಅದ್ಧೂರಿ ಶೋಭಾಯಾತ್ರೆ

ವಿರಾಜಪೇಟೆ: ಚೆಯ್ಯಂಡಾಣೆ ಹಿಂದೂ ಸಂಗಮ ಆಯೋಜನ ಸಮಿತಿ ಮಂಡಲದ ವತಿಯಿಂದ ಹಿಂದೂ ಸಂಗಮ ಅದ್ದೂರಿ ಬೃಹತ್ ಶೋಭಾಯಾತ್ರೆ ನಡೆಯಿತು.

  ಚೆಯ್ಯಂಡಾಣೆಯ ಚೇಲಾವರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆಯ ಮೆರವಣಿಗೆ ಹಿಂದೂ ಸಂಗಮದ ಗಣ್ಯರು ಚಾಲನೆ ನೀಡಿದರು.

   ಚೆಯ್ಯಂಡಾಣೆ ಮುಖ್ಯ ಪಟ್ಟಣದ ಮೂಲಕ ಸಂಚರಿಸಿದ ಶೋಭಾಯಾತ್ರೆ ಮೆರವಣಿಗೆ ಲಕ್ಷ್ಮಿ ಮಹಿಳಾ ಸಮಾಜ ಸಮೀಪ ಸಮಾಪ್ತಿಗೊಂಡಿತು. 

   ವಿವಿಧ ವೇಷಧಾರಿ ಮಕ್ಕಳು, ಭಾರತಾಂಭೆ ಭಾವಚಿತ್ರ ಒಳಗೊಂಡ ವಾಹನದೊಂದಿಗೆ ಕಳಸ ಹೊತ್ತ ಮಹಿಳೆಯರು, ಕೊಡಗಿನ ವಾಲಗ, ದೇಶ ಭಕ್ತಿಯನ್ನು ಸಾರುವ ಪೋಸ್ಟರ್‌ಗಳು ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದರು. ಅಧಿಕ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪುರುಷರು ಮಹಿಳೆಯರಾದಿಯಾಗಿ ಕೇಸರಿ ಶಲ್ಯ ಧರಿಸಿ ಭಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದರು.

   ಮೆರವಣಿಗೆ ಉದ್ದಕ್ಕೂ ಮಕ್ಕಳಿಂದ ಸಾಂಪ್ರದಾಯಿಕ ಭಜನೆ ನೃತ್ಯ ಪ್ರದರ್ಶನ ನಡೆಯಿತು.

ಪವನ್ ತೋಟಂಬೈಲುರವರಿಂದ ಜೈಕಾರ ಮೊಳಗಿತ್ತು.

ವೇದಿಕೆ ಕಾರ್ಯಕ್ರಮ

   ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಹಿಂದೂ ಸಮಾಜದ ಗಣ್ಯರು ಉದ್ಘಾಟಿದರು.

   ಚೆಯ್ಯಂಡಾಣೆ ಹಿಂದೂ ಸಂಗಮ ಮಂಡಳ ಅಧ್ಯಕ್ಷ ಪೊಕ್ಕುಳಂಡ್ರ ದನೋಜ್ (ದಿವ್ಯ)ಮಾತನಾಡಿ ಹಿಂದೂ ನಾವೆಲ್ಲರೂ ಒಂದು ಎಂಬ ದ್ಯೇಯ ನಮ್ಮಲ್ಲಿರಬೇಕು, ಮುಂದಿನ ಯುವ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿ ಮಹತ್ವ ಅರಿವು ಒಗ್ಗೂಡಿಸುವ ಉದ್ದೇಶದಿಂದ ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಪೋಕ್ಲುವಿನಲ್ಲಿ ನಡೆದ ಘಟನೆ ಖೇದಕರ ಎಂದರು.

 ಸಮಾಜ ಸೇವಕಿ ಹಾಗೂ ವಕೀಲೆ ಬಾಚಮಂಡ ಅನುಪಮಾ ಕಿಶೋರ್ ಮಾತನಾಡಿ, ಅತ್ಯಧಿಕ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಸಂದೇಶ ಸಾರಿದ್ದಾರೆ, ಇಂದಿನ ಕಾಲಘಟ್ಟದಲ್ಲಿ ನಮ್ಮ ಹೆಣ್ಣು ಮಕ್ಕಳು ಅಪ್ರಾಪ್ತೆಯಾಗಿ ಅವಳು ಎರಡು, ಮೂರು ಮಕ್ಕಳ ತಾಯಿಯಾಗಿರುತ್ತಾಳೆ, ನಮ್ಮ ಹೆಣ್ಣು ಮಕ್ಕಳು ಮತಾಂತರಕ್ಕೆ ಒಳಗಾಗಿರುತ್ತಾರೆ, 14 ವರ್ಷದ ಮಗು ಕೂಡ ತಾಯಿಯಾದ ಹಲವಾರು ಉದಾಹರಣೆಗಳಿವೆ, ಒಬ್ಬ ತಂದೆಯ ಮೊದಲನೆಯ ಹೆಂಡತಿಯ ಮಗ ತಂದೆಯ ಎರಡನೆಯ ಹೆಂಡತಿಯ ಮಗಳ ಮೇಲೆ ಅತ್ಯಾಚಾರ ಮಾಡಿ ತಾಯಿ ಆಗಿದ್ದಾಳೆ. ಅವಳು 10ನೇ ತರಗತಿಯ ವಿದ್ಯಾರ್ಥಿ. ಪರೀಕ್ಷೆ ಬರೆಯಲು ಕೂಡ ಸಾಧ್ಯವಾಗಲಿಲ್ಲ ಎಂದ ಅವರು ಗ್ರಾಮೀಣ ಭಾಗದವರಿಗೆ ಇದರ ಬಗ್ಗೆ ಅರಿವು ಮೂಡಿಸಿ 18 ವರ್ಷ ಮೇಲ್ಪಟ್ಟ ನಂತರವೇ ಮದುವೆಯಾಗಬೇಕೆಂದು ಮನವರಿಕೆ ಮಾಡಿದರು.

    ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣ್ಯರು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇರುವುದೇ ಈ ದೇಶಕ್ಕೋಸ್ಕರ, ಈ ದೇಶದ ಹಿಂದೂ ಸಮಾಜಕ್ಕೋಸ್ಕರ, ದೇಶಾದ್ಯಂತ ಹಿಂದುಗಳು ಹಳ್ಳಿಗಳಲ್ಲಿ ಗ್ರಾಮಗಳಲ್ಲಿ ನಗರಗಳಲ್ಲಿ ಈ ರೀತಿಯ ಹಿಂದೂ ಸಂಗಮದ ಮುಖಾಂತರ ಆ ಭಾಗದ ಹಿಂದುಗಳನ್ನು ಸೇರಿಸಿಕೊಂಡು ಹಿಂದೂ ಧರ್ಮ, ನಮ್ಮ ಸಂಸ್ಕೃತಿ, ಸಾಂಪ್ರದಾಯ, ನಮ್ಮ ನಾಗರಿಕತೆ ಪರಂಪರೆಯನ್ನು ಸ್ಮರಣೆ ಮಾಡೋಣ, ನೆನಪು ಮಾಡೋಣ. ಇವತ್ತಿನ ಯುವ ಪೀಳಿಗೆಗೆ ನಮ್ಮ ಚಿಂತನೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಿಕೋಸ್ಕರ ಈ ರೀತಿಯ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 3000ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ತರದ ಕಾರ್ಯಕ್ರಮ ನಡೆದಿದೆ.

    ಹಿಂದುತ್ವ ಅನ್ನೋದು ಯಾರ ವಿರೋಧಿನು ಅಲ್ಲ, ಅದೊಂದು ಜೀವನ ಪದ್ಧತಿ ಎಂದು ಜಗತ್ತು ಹಾಗೂ ನಮ್ಮ ದೇಶದ ಸುಪ್ರೀಂಕೋರ್ಟ್ ಹೇಳಿದೆ. ಎಲ್ಲರೂ ಸಹಬಾಳ್ವೆಯಿಂದ ಯಾವುದೇ ಧರ್ಮಭೇದವಿಲ್ಲದೆ ಸೌಹಾರ್ದತೆಯಿಂದ ಕೂಡಿರಬೇಕು ಎಂದು ಕಲಿಸಿಕೊಟ್ಟಿದೆ. ನಾವು ಯಾರ ವಿರೋಧಿನು ಅಲ್ಲ. ಆದರೆ ಇತ್ತೀಚಿಗೆ ಅಪಪ್ರಚಾರ ಅವಮಾನ ಮಾಡುವಂತ ಕೆಲಸಗಳು ನಡೆಯುತ್ತಿದೆ. ಇವತ್ತು ಹಿಂದುತ್ವ ಅನ್ನೋದು ಮುಸಲ್ಮಾನರ ಇತರ ಧರ್ಮದವರ ವಿರುದ್ಧ ಹಿಂದುತ್ವದ ಕಾರಣದಿಂದ ದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬುದು ಸರಿಯಲ್ಲ. ನಾವು ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆಯ ಸಂದೇಶವನ್ನು ಕೊಡುವವರು. ಜಗತ್ತು ಇವತ್ತು ಭಾರತವನ್ನು ನೋಡುತ್ತಿದೆ. ಜಗತ್ತಿನ ವಿಶ್ವಗುರು ಭಾರತ ಆಗಲಿದೆ, ಜಗತ್ತಿಗೆ ಬೆಳಕು ಕೊಟ್ಟವರು ನಾವು ಅದಕ್ಕೆ ಜಗತ್ತು ಭಾರತವನ್ನು ಒಪ್ಪಿಕೊಳ್ಳುತ್ತಿದೆ ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ವಹಿಸಿ ಮಾತನಾಡಿ ನಮ್ಮ ಅಸ್ಥಿತ್ವಕ್ಕೆ ದಕ್ಕೆ ಬಂದಾಗ ನಾವು ಪ್ರತಿಭಟಿಸಬೇಕು, ಪ್ರತಿಭಟಿಸದಿದ್ದರೆ ಏನು ಪ್ರಯೋಜನ, ಯಾರಿಗೆ ಕಣ್ಣಿಲ್ಲವೋ ಅವರಿಗೆ ಕನ್ನಡಿ ಕೊಟ್ಟು ಪ್ರಯೋಜನವಿಲ್ಲ, 100 ವರ್ಷದಿಂದ ನಮ್ಮ ದೇಶ, ನಮ್ಮ ಮಣ್ಣಿನ ರಕ್ಷಣೆಗಾಗಿ ಸ್ವಯಂ ಸೇವಕ ಸಂಘ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ನಮ್ಮ ಮನೆಯಲ್ಲಿ ದೇವರ ಪ್ರಾರ್ಥನೆಗೆ ಆಧ್ಯತೆ ಕೊಡಬೇಕು, ದೇವರ ಭಜನೆ ಮಾಡಿ ಸ್ಲೋಕ ಪಠಿಸಿ, ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಿ, ಸಾಮಾಜಿಕ ಸಾಮರಸ್ಯಕ್ಕೆ ಒತ್ತು ಕೊಡೋಣ ಎಂದ ಅವರು ಹಿರಿಯರಿಗೆ ಗೌರವ ಕೊಟ್ಟು, ಪರಿಸರ ಉಳಿಸಿ, ಗೊ ಮಾತೇ ರಕ್ಷಣೆ ಮಾಡಿ ಎಂದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ತಳೂರು ಕಿಶೋರ್ ಕುಮಾರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುದಿಯೋಕ್ಕಡ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಬಿದ್ದಂಡ ರಾಜೇಶ್ ಅಚ್ಚಯ್ಯ, ಚೇನಂಡ ಸಂಪತ್, ಐತಿಚಂಡ ಭೀಮಯ್ಯ, ಬೆಳಿಯಂಡ್ರ ಹರಿಪ್ರಸಾದ್, ಸಜನ್ ನಂಜುಂಡ, ಸೇರಿದಂತೆ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರಮುಖರು, ಹಿಂದೂ ಸಂಗಮ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು, ಮತ್ತಿತರರು ಇದ್ದರು.

  ಲೀಲಾವತಿ ಪ್ರಾರ್ಥಿಸಿ, ಬೆಳಿಯಂಡ್ರ ಚಂದ್ರಶೇಖರ್ ನಿರೂಪಿಸಿ, ತೋಟಂಬೈಲು ಅನಂತ್ ಕುಮಾರ್ ಸ್ವಾಗತಿಸಿ, ಬೇಪಡಿಯಂಡ ವಿಲಿನ್ ವಂದಿಸಿದರು.