ಮರ್ಯಾದೆಗೇಡು ಹತ್ಯೆ: ಅಳಿಯ ಬೇರೆ ಜಾತಿಯವನೆಂದು ಕೊಚ್ಚಿ ಕೊಂದ ಮಾವ | ಮದುವೆಯಾದ ಮೂರು ತಿಂಗಳಿಗೆ ತಂದೆಯಿಂದಲೇ ವಿಧವೆಯಾದ ಮಗಳು!

ಮರ್ಯಾದೆಗೇಡು ಹತ್ಯೆ: ಅಳಿಯ ಬೇರೆ ಜಾತಿಯವನೆಂದು ಕೊಚ್ಚಿ ಕೊಂದ ಮಾವ  | ಮದುವೆಯಾದ ಮೂರು ತಿಂಗಳಿಗೆ ತಂದೆಯಿಂದಲೇ ವಿಧವೆಯಾದ ಮಗಳು!
Photo credit: spark Tamil.com

ದಿಂಡಿಗಲ್, ಅ. 15:/ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ವಟ್ಟಲಕುಂಡು ಬಳಿಯ ರಾಮನಾಯಕನ್ ಪಟ್ಟಿ ಗ್ರಾಮದಲ್ಲಿ ನಡೆದ ಕ್ರೂರ ಹತ್ಯೆ ಪ್ರಕರಣ ರಾಜ್ಯದಾದ್ಯಂತ ಆಕ್ರೋಶ ಮೂಡಿಸಿದೆ. ಕೇವಲ ಬೇರೆ ಜಾತಿಯವನಾಗಿದ್ದ ಕಾರಣಕ್ಕೆ ಮಾವನೊಬ್ಬ ತನ್ನ ಅಳಿಯನನ್ನು ಕೊಚ್ಚಿ ಕೊಂದಿರುವ ಮರ್ಯಾದೆಗೇಡು ಹತ್ಯೆ ಬೆಳಕಿಗೆ ಬಂದಿದೆ.

 ಮೃತರನ್ನು ರಾಮಚಂದ್ರನ್ (24) ಎಂದು ಗುರುತಿಸಲಾಗಿದೆ. ಅವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿ ಚಂದ್ರನ್, ತನ್ನ ಮಗಳು ಆರತಿ (21) ಬೇರೆ ಜಾತಿಗೆ ಸೇರಿದ್ದ ರಾಮಚಂದ್ರನ್‌ರನ್ನು ಪ್ರೀತಿಸಿ ಮದುವೆಯಾದ ವಿಷಯವನ್ನು ಒಪ್ಪಿಕೊಳ್ಳದೆ, ಕೋಪದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರೇ ತಿಂಗಳ ಹಿಂದೆ ರಾಮಚಂದ್ರನ್ ಮತ್ತು ಆರತಿ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. ಇಬ್ಬರೂ ಇನ್‌ಸ್ಟಾಗ್ರಾಮ್ ಮೂಲಕ ಪರಿಣತರಾಗಿದ್ದರು. ರಾಮಚಂದ್ರನ್ ಅವರ ಕುಟುಂಬ ಈ ವಿವಾಹವನ್ನು ಸ್ವೀಕರಿಸಿದ್ದರೂ, ಆರತಿಯ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮದುವೆಯ ನಂತರವೂ ಚಂದ್ರನ್ ಅಳಿಯನಿಗೆ ಹಲವಾರು ಬಾರಿ ಕೊಲೆ ಬೆದರಿಕೆ ನೀಡಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 13ರ ಬೆಳಿಗ್ಗೆ ರಾಮಚಂದ್ರನ್ ಹಾಲು ಮಾರಾಟಕ್ಕಾಗಿ ಬೈಕ್‌ನಲ್ಲಿ ಕುಲಿಪ್ಪಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಚಂದ್ರನ್ ದಾರಿಗೆ ಅಡ್ಡಹಾಕಿ ವಾಗ್ವಾದ ನಡೆಸಿದನು. ಕೋಪದಿಂದ ಮೊದಲೇ ತಂದು ಅಡಗಿಸಿಟ್ಟಿದ್ದ ಕತ್ತಿಯಿಂದ, ರಾಮಚಂದ್ರನ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ನೀಲಕೊಟ್ಟೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ದಿಂಡಿಗಲ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

 ಜಾತಿ ಆಧಾರಿತ ಹತ್ಯೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಚಂದ್ರನ್ ಸ್ವಯಂ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.