ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಭೀಕರ ಅಗ್ನಿ ದುರಂತ: ಸಜೀವ ದಹನವಾದ ಪ್ರಯಾಣಿಕರ ಸಂಖ್ಯೆ 20 ಕ್ಕೆ ಏರಿಕೆ : ಬಸ್ ಗೆ ಬೆಂಕಿ ಹತ್ತಿಕೊಂಡಿದ್ದು ಹೇಗೆ? ದಾರಿ ಮಧ್ಯೆ ಬಸ್ ಹತ್ತಿದ 46ನೇ ಪ್ರಯಾಣಿಕ ಯಾರು?

ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಭೀಕರ ಅಗ್ನಿ ದುರಂತ: ಸಜೀವ ದಹನವಾದ ಪ್ರಯಾಣಿಕರ ಸಂಖ್ಯೆ 20 ಕ್ಕೆ ಏರಿಕೆ  :   ಬಸ್ ಗೆ ಬೆಂಕಿ ಹತ್ತಿಕೊಂಡಿದ್ದು ಹೇಗೆ? ದಾರಿ ಮಧ್ಯೆ ಬಸ್ ಹತ್ತಿದ 46ನೇ ಪ್ರಯಾಣಿಕ ಯಾರು?

ಕರ್ನೂಲ್, ಅ.24: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನೇಕೂರ್ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಕನಿಷ್ಠ 20 ಮಂದಿ ಪ್ರಯಾಣಿಕರು ಜೀವಂತವಾಗಿ ಸುಟ್ಟುಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

 ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿಗಾಹುತಿಯಾಗಿದೆ.

ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಒಟ್ಟು 46 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣವಾಗಿ ಜ್ವಾಲಾಮುಖಿಯಂತಾಗಿ ಮಾರ್ಪಟ್ಟಿದ್ದು, ಪಾರಾಗುವ ಅವಕಾಶವಿಲ್ಲದೆ 20 ಮಂದಿ ಜೀವಂತವಾಗಿ ದಹನಗೊಂಡಿದ್ದಾರೆ. 12 ಮಂದಿ ತುರ್ತು ನಿರ್ಗಮನದ ಮೂಲಕ ಪಾರಾಗಿದ್ದು, ಉಳಿದವರು ಗಂಭೀರ ಗಾಯಗೊಂಡಿದ್ದಾರೆ. ಬೈಕ್ ಸವಾರನೂ ಸ್ಥಳದಲ್ಲೇ ಮೃತಪಟ್ಟಿರುವುದು ದೃಢಪಟ್ಟಿದೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ತೀವ್ರತೆಯಿಂದಾಗಿ ಕೆಲ ಮೃತದೇಹಗಳು ಗುರುತು ಸಿಗದ ಮಟ್ಟಿಗೆ ಸುಟ್ಟುಹೋಗಿವೆ.

ಆಂಧ್ರಪ್ರದೇಶದ ಗೃಹ ಸಚಿವೆ ವಂಗಲಪುಡಿ ಅನಿತಾ ಅವರು ಕರ್ನೂಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಘಟನೆಯ ಕುರಿತು ವಿವರ ನೀಡಿದರು.

“ಬಸ್‌ನಲ್ಲಿ 39 ಮಂದಿ ಹಿರಿಯ ಪ್ರಯಾಣಿಕರು, 4 ಮಕ್ಕಳು ಹಾಗೂ 2 ಮಂದಿ ಚಾಲಕರು ಸೇರಿ ಒಟ್ಟು 45 ಮಂದಿ ಇದ್ದರು. ದಾರಿ ಮಧ್ಯೆ ಓರ್ವ ಪ್ರಯಾಣಿಕ ಹತ್ತಿಕೊಂಡಿದ್ದ. ಹೀಗಾಗಿ ಒಟ್ಟು 46 ಜನ ಪ್ರಯಾಣಿಕರಿದ್ದರು. ಈ ಪೈಕಿ 18 ಮಂದಿ ಹಿರಿಯರು ಮತ್ತು 2 ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ. 45 ಜನರ ಗುರುತು ಪತ್ತೆಯಾಗಿದೆ. 46ನೇ ಪ್ರಯಾಣಿಕನ ಗುರುತು ಪತ್ತೆ ಮಾಡುವುದು ಸವಾಲಾಗಿದೆ. ಮೃತದೇಹಗಳ ಗುರುತಿನ ದೃಢೀಕರಣಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಯಲಿದೆ” ಎಂದರು.

ವಿಧಿವಿಜ್ಞಾನ ಪ್ರಯೋಗಾಲಯದ 16 ತಂಡಗಳು ಮಾದರಿ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಘಟನೆಯ ನಿಖರ ಕಾರಣ ಪತ್ತೆಗೆ 4 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.

ಸಾರಿಗೆ ಸಚಿವ ರಾಮಪ್ರಸಾದ್ ರೆಡ್ಡಿ ಅವರ ಪ್ರಕಾರ, ಈ ಅಪಘಾತವು ಬೆಳಗಿನ 3ರಿಂದ 3.15ರ ಮಧ್ಯೆ ಸಂಭವಿಸಿದ್ದು, ಬೈಕ್ ಬಸ್‌ನಡಿಗೆ ಬಿದ್ದು, ಸುಮಾರು 15ರಿಂದ 20 ಮೀಟರ್ ಅದನ್ನು ಬಸ್ ಎಳೆದುಕೊಂಡು ಹೋಗಿದೆ. ಇದರಿಂದ ಉಂಟಾದ ಕಿಡಿ ಬಸ್‌ಗೆ ತಗುಲಿ ಬೆಂಕಿ ವ್ಯಾಪಿಸಿದೆ ಎಂದರು.

“ಮೃತರಲ್ಲಿ 6 ಮಂದಿ, ಆಂಧ್ರಪ್ರದೇಶದವರು, 6 ಮಂದಿ ತೆಲಂಗಾಣದವರು ಹಾಗೂ ಇತರರು ಬೇರೆ ರಾಜ್ಯಗಳ ನಿವಾಸಿಗಳು. 27 ಮಂದಿ ಪಾರಾದವರಲ್ಲಿ 9 ಮಂದಿಗೆ ಗಾಯಗಳಾಗಿವೆ. ಚಾಲಕ ನಮ್ಮ ವಶದಲ್ಲಿದ್ದು, ತನಿಖೆ ಮುಂದುವರಿದಿದೆ", ಎಂದು ಅವರು ಹೇಳಿದರು.

ಈ ದುರಂತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ ₹2 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ.

ಗೃಹ ಸಚಿವೆ ಅನಿತಾ ಹೇಳಿದರು, “ಹೊಸ ಬಸ್‌ಗಳಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಇದ್ದರೂ, ಈ ಹಳೆಯ ಬಸ್‌ನಲ್ಲಿ ಅದು ಇರಲಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಖಾಸಗಿ ಬಸ್ ಸಂಸ್ಥೆಗಳಿಗೆ ಸುರಕ್ಷತಾ ಮಾನದಂಡ ಪಾಲನೆ ಕಡ್ಡಾಯಗೊಳಿಸಲಾಗುವುದು,” ಎಂದು ತಿಳಿಸಿದರು. 

ದುರಂತಕ್ಕೀಡಾದ ಬಸ್ ವೇಮೂರಿ ಸುಬ್ಬರಾವ್ ಅವರ ಕಾವೇರಿ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ್ದು, 2018ರಿಂದ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವೆಡೆ ಶಾಖೆಗಳನ್ನು ಹೊಂದಿದೆ. ಬಸ್‌ನ ಇಬ್ಬರು ಚಾಲಕರು ಅನುಭವಿಗಳು ಎನ್ನಲಾಗಿದೆ.