ಸಿಗದ ಸಿಲಿಂಡರ್​​, ಹೊಟೇಲ್​ ಮುಚ್ಚಿ ಸಾಲದ ಸುಳಿಗೆ ಸಿಲುಕಿದ್ದ ಹೋಟೆಲ್ ಮಾಲೀಕ ಆತ್ಮಹತ್ಯೆ

Mar 24, 2026 - 23:03
 0  1k
ಸಿಗದ ಸಿಲಿಂಡರ್​​, ಹೊಟೇಲ್​ ಮುಚ್ಚಿ ಸಾಲದ ಸುಳಿಗೆ ಸಿಲುಕಿದ್ದ ಹೋಟೆಲ್ ಮಾಲೀಕ ಆತ್ಮಹತ್ಯೆ
ಗ್ಯಾಸ್

ಚಿಕ್ಕೋಡಿ (ಬೆಳಗಾವಿ): ವಾಣಿಜ್ಯ ಸಿಲಿಂಡರ್ ಸಿಗದ ಕಾರಣದಿಂದ ಹೋಟೆಲ್ ಮುಚ್ಚಿ, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಿಯೊಬ್ಬರು ಸಾಲಗಾರರ ಕಾಟ ತಾಳಲಾರದೇ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ 'ಹನುಮಾನ್ ಹೋಟೆಲ್' ನಡೆಸುತ್ತಿದ್ದ ರಾಮ ಹಳ್ಳೂರಿ (62)ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್ ಲಭ್ಯವಾಗದ ಕಾರಣ, ಅನಿವಾರ್ಯವಾಗಿ ರಾಮ ಅವರು ತಮ್ಮ ಹೋಟೆಲ್ ಬಂದ್ ಮಾಡಿದ್ದರು. ಹೋಟೆಲ್ ವ್ಯಾಪಾರವೇ ಅವರ ಆದಾಯದ ಮೂಲವಾಗಿದ್ದರಿಂದ, ವ್ಯವಹಾರ ನಿಂತುಹೋಗಿ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು. ಇದರಿಂದಾಗಿ ಅವರ ಹಣಕಾಸಿನ ವ್ಯವಹಾರದಲ್ಲಿ ಭಾರಿ ಏರುಪೇರಾಗಿತ್ತು ಎನ್ನಲಾಗಿದೆ.

ಹೋಟೆಲ್ ಬಂದ್ ಆಗಿದ್ದರಿಂದ ದೈನಂದಿನ ಆದಾಯ ಸ್ಥಗಿತಗೊಂಡಿತ್ತು. ಇನ್ನೊಂದೆಡೆ ಮಾರ್ಚ್ ತಿಂಗಳ ಅಂತ್ಯವಾದ್ದರಿಂದ ಸಾಲಗಾರರು ಹಾಗೂ ಬಡ್ಡಿಗಾಗಿ ಒತ್ತಡಗಳು ಹೆಚ್ಚಾಗಿದ್ದವು. ಎಷ್ಟೇ ಪ್ರಯತ್ನಿಸಿದರೂ ಹಣದ ಹೊಂದಾಣಿಕೆ ಮಾಡಲು ಸಾಧ್ಯವಾಗದ ಕಾರಣ ತೀವ್ರವಾಗಿ ಮನನೊಂದಿದ್ದ ರಾಮ ಅವರು, ಬಡ್ಡಿ ಕಾಟವನ್ನು ತಾಳಲಾರದೇ ಈ ಕಠಿಣ ನಿರ್ಧಾರ ತೆಗೆದುಕೊಂಡು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಮರುಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯು ಸ್ಥಳೀಯ ವ್ಯಾಪಾರಿ ವಲಯದಲ್ಲಿ ತೀವ್ರ ಆಘಾತ ಹಾಗೂ ವಿಷಾದ ಮೂಡಿಸಿದೆ. ಚಿಕ್ಕೋಡಿ ಹಾಗೂ ಹುಕ್ಕೇರಿ ಭಾಗದಲ್ಲಿ ಈ ಸುದ್ದಿ ಸಂಚಲನ ಮೂಡಿಸಿದೆ‌.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0