ಗೃಹಿಣಿ ಆತ್ಮಹತ್ಯೆ: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ

Nov 25, 2025 - 14:20
 0  915
ಗೃಹಿಣಿ ಆತ್ಮಹತ್ಯೆ: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ
Photo credit: Etv bharath (ಫೋಟೋ: ಪತ್ನಿ ಹಾಗೂ ಪತಿ)

ಬೆಂಗಳೂರು: ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ರೇಖಾ (25) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಷಕರ ದೂರಿನಂತೆ ಪತಿ ಮಾಯಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಗಾವಿ ಮೂಲದ ಮಾಯಪ್ಪ–ರೇಖಾ ದಂಪತಿ ಆರು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೇ ಪ್ರೇಮ ವಿವಾಹ ಮಾಡಿಕೊಂಡಿದ್ದರು. ದಂಪತಿಗೆ ನಾಲ್ಕು ವರ್ಷದ ಗಂಡು ಹಾಗೂ ಎರಡು ವರ್ಷದ ಹೆಣ್ಣು ಮಕ್ಕಳು ಇದ್ದಾರೆ. ಮೂರು ತಿಂಗಳ ಹಿಂದೆ ಗೋವಿಂದರಾಜನಗರದ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದ್ದರು. ಮಾಯಪ್ಪ ಜಿಬಿಎ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದರು. ರೇಖಾ ಗೃಹಿಣಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ವರ್ಷಗಳು ಸುಖಸಮಾಧಾನದಲ್ಲಿ ಕಳೆದ ದಾಂಪತ್ಯ ಜೀವನ, ಇತ್ತೀಚಿನ ದಿನಗಳಲ್ಲಿ ವೈಮನಸ್ಸಿಗೆ ತಿರುಗಿತ್ತು. ನವೆಂಬರ್ 22ರಂದು ಸಂಜೆ ಮಾಯಪ್ಪ ಮಕ್ಕಳು ಜೊತೆಗೂಡಿ ಊಟ ತರಲು ಹೊರಗಡೆ ಹೋದಾಗ, ಮನೆಯಲ್ಲಿ ಒಬ್ಬಳೇ ಇದ್ದ ರೇಖಾ ಆತ್ಮಹತ್ಯೆಗೆ ಯತ್ನಿಸಿದ್ದರು. ಮನೆಗೆ ಹಿಂತಿರುಗಿದ ಮಾಯಪ್ಪ ಪತ್ನಿಯನ್ನು ಆ ಸ್ಥಿತಿಯಲ್ಲಿ ಕಂಡು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

"ಮಗಳ ಮೇಲೆ ವರದಕ್ಷಿಣೆಯ ಒತ್ತಡ ಹೇರುತ್ತಿದ್ದ. ಪತಿಯ ಹಿಂಸೆ ತಾಳಲಾರದೆ ಆಕೆಯು ಸಾವಿಗೆ ಶರಣಾಗಿದ್ದಾಳೆ. ಮಾಯಪ್ಪನ ವಿರುದ್ಧ ಕ್ರಮ ಕೈಗೊಳ್ಳಬೇಕು," ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

 ಮಾಯಪ್ಪಗೆ ಬಂದ ವೇತನ ಕಡಿಮೆಯಾಗಿತ್ತು. ಇತ್ತೀಚೆಗೆ ಅವರ ಸಹೋದರರ ಸಾವು ಸಂಭವಿಸಿತ್ತು. ಹಣವೆಲ್ಲವೂ ಕಾರ್ಯಗಳಿಗೆ ಖರ್ಚಾಗಿತ್ತು. ಇದರಿಂದ ರೇಖಾ ನಮಗೆ ಗಮನ ಕೊಡುತ್ತಿಲ್ಲ ಎಂದು ಜಗಳ ತೆಗೆದಿದ್ದರು. ದಾಂಪತ್ಯದಲ್ಲಿ ಕಲಹಗಳು ನಡೆದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 

ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1