ಚಿಕ್ಕಮಗಳೂರಿನಲ್ಲಿ ಗೃಹಿಣಿಯ ಹತ್ಯೆ: ಅತ್ತೆಮಗಳನ್ನೇ ಕೊಂದ ‘ಮಾವ’! : ಎರಡು ದಿನಗಳ ಬಳಿಕ ಆರೋಪಿ ವಶಕ್ಕೆ
ಚಿಕ್ಕಮಗಳೂರು, ಡಿ. 05: ಅತ್ತೆಮಗಳು ದೂರವಾಗುತ್ತಿದ್ದ ಸಿಟ್ಟಿಗೆ ಆಕೆಯನ್ನು ಹತ್ಯೆಗೈದ ಆರೋಪದಲ್ಲಿ ಆಲ್ದೂರು ಪೊಲೀಸರು ಮೂಡಿಗೆರೆ ತಾಲೂಕಿನ ವಾಟೆಖಾನ್ ಗ್ರಾಮದ ಜನಾರ್ಧನ್ (38) ಎಂಬಾತನನ್ನು ಬಂಧಿಸಿದ್ದಾರೆ.
ಅರೇನೂರು ಗ್ರಾಮದ ಗೃಹಿಣಿ ಸಂಧ್ಯಾ ಹತ್ಯೆ ಮಾಡಿದ ಆರೋಪಿ ಆರೋಪಿ ಕೊನೆಗೂ ಕಾಡಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಡಿಸೆಂಬರ್ 1ರ ಬೆಳಗ್ಗೆ ಸಂಧ್ಯಾ ಅವರ ಮೃತದೇಹ ಮನೆಯ ಹಿಂಭಾಗದಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಯ ಬಳಿಕ ಆರೋಪಿ ಜನಾರ್ಧನ್ ಪರಾರಿಯಾಗಿದ್ದು, ಎರಡು ದಿನಗಳ ಕಾಲ ಕಾಡಿನಲ್ಲಿ ಅಡಗಿ ಕುಳಿತಿದ್ದ. ಖಚಿತ ಮಾಹಿತಿಯ ಮೇರೆಗೆ ಆಲ್ದೂರು ಠಾಣಾ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.
ಸಂಧ್ಯಾ ಮತ್ತು ಜನಾರ್ಧನ್ ನಡುವೆ ಅತ್ತೆಮಗಳು–ಮಾವನ ಸಂಬಂಧ. ಬಾಲ್ಯದಿಂದಲೂ ಇಬ್ಬರಿಗೂ ಸಲಿಗೆ ಬೆಳೆದಿದ್ದು, ಆ ಆತ್ಮೀಯತೆ ನಂತರ ಪ್ರೀತಿಗೆ ತಿರುಗಿತ್ತು. ಕುಟುಂಬದ ಒತ್ತಡದಿಂದ ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿದ್ದರೂ, ಸಂಬಂಧ ಕಡಿದಿರಲಿಲ್ಲ.
ಮನೆಮಂದಿಯ ಗಲಾಟೆ, ಪತಿ–ಪತ್ನಿಯ ಅಸಮಾಧಾನಗಳ ಹಿನ್ನೆಲೆಯಲ್ಲಿ ಸಂಧ್ಯಾ ಮೂರು ವರ್ಷಗಳ ಹಿಂದೆ ಮೂರು ಮಕ್ಕಳನ್ನು ಕರೆದುಕೊಂಡು ತಾಯಿ ಮನೆ ಸೇರಿದ್ದರು. ಈ ನಡುವೆ ಜನಾರ್ಧನ್ ಮತ್ತು ಸಂಧ್ಯಾಳ ‘ಅನೈತಿಕ ಸಂಬಂಧ’ ಮತ್ತಷ್ಟು ಗಟ್ಟಿಯಾಗಿತ್ತು. ಇದೇ ವಿಚಾರಕ್ಕೆ ಜನಾರ್ಧನ್ ಪತ್ನಿಯೂ ಇಬ್ಬರು ಮಕ್ಕಳೊಂದಿಗೆ ತವರು ಮನೆ ಸೇರಿಕೊಂಡಿದ್ದಳು.
ನವೆಂಬರ್ 30ರಂದು ಸಂಧ್ಯಾ ವಾಟೆಖಾನ್ನಿಂದ ಅರೇನೂರು ವಾಪಸ್ಸಾಗಿದ್ದರು. ಮುಂದಿನ ದಿನ ಬೆಳಗ್ಗೆ ಜನಾರ್ಧನ್ಗೆ ಕರೆ ಮಾಡಿ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹೆಂಡತಿಯ ಕಾಟ, ಸಂಬಂಧದ ಒತ್ತಡ, ಸಂಧ್ಯಾಳ ಒತ್ತಾಯ—ಇವುಗಳ ನಡುವೆ ತಾಳ್ಮೆ ಕಳೆದುಕೊಂಡ ಜನಾರ್ಧನ್, ತಾನು ತಂದಿದ್ದ ಚಾಕುವಿನಿಂದ ಸಂಧ್ಯಾಳ ಕತ್ತು ಕೊಯ್ದು ಪರಾರಿಯಾಗಿದ್ದಾನೆಂಬುದು ತನಿಖೆಯಿಂದ ಬಹಿರಂಗವಾಗಿದೆ.
ಬಂಧಿತನಾದ ಜನಾರ್ಧನ್ನ್ನು ಪೊಲೀಸರು ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.