ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಹೇಗೆ ಕಾಪಾಡಿಕೊಳ್ಳುವುದು‌! ಇಲ್ಲಿದೆ ‌ನೋಡಿ ಬೆಸ್ಟ್ ಟಿಪ್ಸ್

ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಹೇಗೆ ಕಾಪಾಡಿಕೊಳ್ಳುವುದು‌!  ಇಲ್ಲಿದೆ ‌ನೋಡಿ ಬೆಸ್ಟ್ ಟಿಪ್ಸ್

ಮಳೆಗಾಲ ಬಂದಾಗ ಎಷ್ಟು ಮಳೆ ಎಂದರು ಬಂತಲ್ಲ ಚಳಿಗಾಲ ಕೆಟ್ಟ ಚಳಿಯಲ್ಲವೇ...... ಆದರೆ ಚಳಿಗಾಲವನ್ನು ಅನುಭವಿಸುವ ಮನಸಿರಬೇಕು ಆಯಾಯ ಕಾಲಕ್ಕೆ ತಕ್ಕಂತೆ ಜೀವಿಸುವ ಕಲೆ ಇರಬೇಕು. ಬೆಚ್ಚಗಿನ ಉಡುಪುಗಳನ್ನು ಧರಿಸಿ ಬಿಸಿ ಬಿಸಿಯಾದ ಆಹಾರವನ್ನು ಸೇವಿಸುತ್ತಾ ಹಿತವಾದ ಸಂಗೀತ ಕೇಳುವುದು ಉತ್ತಮ ಆರೋಗ್ಯಕ್ಕೆ ಮೈಲಿ ಗಲ್ಲು. ಚಳಿಗಾಲಕ್ಕೆ ಚರ್ಮವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದಕ್ಕೆ ಸ್ವಲ್ಪ ಟಿಪ್ಸ್ ನಿಮ್ಮೊಂದಿಗೆ.

ಚರ್ಮದ ಚೆಲುವು ನಾವು ಹೇಗೆ ಹಾರೈಕೆ ಮಾಡುತ್ತೇವೆಯೋ ಆ ಪ್ರಕಾರವಾಗಿಯೇ ಇರುತ್ತದೆ. ದೇಹದ ಹೊರಗಿನಿಂದ ಲೇಪಿಸುವ ಲೇಪನಗಳಿಂದ ಚರ್ಮ ಸುಂದರವಾಗುತ್ತದೆ ಎನ್ನುವುದು ಐವತ್ತು ಪರ್ಸೆಂಟ್ ನಿಜವಾದರೆ ಹೊಟ್ಟೆಗೆ ತೆಗೆದುಕೊಳ್ಳುವ ಆಹಾರಗಳು ಕೂಡ ನಮ್ಮ ದೇಹದ ಚರ್ಮಕ್ಕೆ ಅತಿ ಮುಖ್ಯ. ರಾತ್ರಿ ಎರಡು ಬಾದಾಮಿಯನ್ನು ಹಾಲಿನಲ್ಲಿ ನೆನೆಯಲು ಹಾಕಿ ಬೆಳಿಗ್ಗೆ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಬೇಕು.

 ಎರಡು ಟೇಬಲ್ ಚಮಚ ಹಾಲಿನ ಕೆನೆ ಒಂದು ಟೀ ಚಮಚ ಬಾದಾಮಿ ಎಣ್ಣೆ ಒಂದು ಚಮಚ ರೋಸ್ ವಾಟರ್ ಈ ಮಿಶ್ರಣವನ್ನು ನಿತ್ಯವೂ ಮುಖಕ್ಕೆ ಹಚ್ಚುವುದರಿಂದ ಮೃದುವಾದ ತ್ವಚೆ ನಿಮ್ಮದಾಗುತ್ತದೆ. ಹಾಲಿನ ಕೆನೆಗೆ ಕೆಲವು ತೊಟ್ಟು ನಿಂಬೆರಸ ಹಾಕಿ ಮುಖದ ಮೇಲೆ ಮೃದುವಾಗಿ ಹಚ್ಚಿ 30 ನಿಮಿಷದ ನಂತರ ತೊಳೆಯಿರಿ. ಸಾಸಿವೆ ಎಣ್ಣೆ ಮತ್ತು ತೆಂಗಿನೆಣ್ಣೆ ಸಮ ಪ್ರಮಾಣದಲ್ಲಿ ಬೆರೆಸಿ ಕೈಕಾಲುಗಳಿಗೆ ಮಾಲಿಶ್ ಮಾಡುವುದರಿಂದ ಮೃದುವಾದ ಚರ್ಮ ನಿಮ್ಮದಾಗುತ್ತದೆ.

ಚಳಿಗಾಲದಲ್ಲಿ ಸ್ನಾನಕ್ಕೆ ಕಡಲೆಹಿಟ್ಟನ್ನು ಬಳಸಿದರೆ ಮೃದುವಾದ ಚರ್ಮ ಪಡೆಯಬಹುದು. ಗ್ಲಿಸರಿನ್, ನಿಂಬೆರಸ ಮತ್ತು ಸಕ್ಕರೆಯ ಮಿಶ್ರಣವನ್ನು ಪ್ರತಿದಿನ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖದ ಡೆಡ್ ಸ್ಕಿನ್ ಸಮಸ್ಯೆ ಪರಿಹಾರವಾಗುತ್ತದೆ. ದಿನ ರಾತ್ರಿ ಒಂದು ಗ್ಲಾಸ್ ಹಾಲಿಗೆ ಅರ್ಧ ಚಮಚ ಬೆಣ್ಣೆ ಹಾಕಿ ಸೇವಿಸಿದರೆ ಚಳಿಗಾಲದ ಅಡ್ಡ ಪರಿಣಾಮಗಳಿಂದ ಹೊರ ಬರಬಹುದು. ಒಂದು ಚಮಚ ತುಳಸಿರಸಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚರ್ಮ ಸುಂದರವಾಗುತ್ತದೆ.

ದಿನ ಬೆಳಿಗ್ಗೆ ಬಿಸಿನೀರಿಗೆ ಅರ್ಧ ಚಮಚ ತುಪ್ಪ ಸೇರಿಸಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಮೃದುತ್ವ ಸಿಗುತ್ತದೆ. ತರಕಾರಿಗಳ ಸೂಪ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು ದಿನ ರಾತ್ರಿ ನಾಲ್ಕು ಬಾದಾಮಿ ನೆನೆ ಹಾಕಿ ಬೆಳಿಗ್ಗೆ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಚಳಿಗಾಲದಲ್ಲಿ ಸೂರ್ಯನ ಕಿರಣಕ್ಕೆ ಮೈ ಒಡ್ಡಿದರೆ ವಿಟಮಿನ್ ಡಿ ಕೊರತೆಯಿಂದ ಹೊರ ಬರಬಹುದು.

15 ದಿನಗಳಿಗೆ ಒಮ್ಮೆ ಎಣ್ಣೆ ಸ್ನಾನದ ಅಭ್ಯಾಸ ಒಳ್ಳೆಯದು. ಆಹಾರದಲ್ಲಿ ಅಗಸೆ ಬೀಜ, ಎಳ್ಳು, ಮೆಂತೆ, ಸೊಪ್ಪು ತರಕಾರಿಗಳು ಆಯಾಯ ಕಾಲಕ್ಕೆ ಸಿಗುವ ಹಣ್ಣುಗಳು ಬಳಕೆಯಲ್ಲಿರಲಿ. ನೀರಿನ ಅಂಶ ಹೆಚ್ಚಾಗಿರುವಂತಹ ಆಹಾರಗಳು ಮತ್ತು ನಾವು ಕುಡಿಯುವ ನೀರು, ವ್ಯಾಯಮ ಇವೆಲ್ಲವೂ ಕೂಡ ಉತ್ತಮ ಆರೋಗ್ಯದ ಗುಟ್ಟಾಗಿರಲಿ. ಚಳಿಗಾಲವನ್ನು ಪ್ರೀತಿಯಿಂದ ಅನುಭವಿಸೋಣ ಮುಂದೆ ಬೇಸಿಗೆ ಬಂದಾಗ ನೋಡಿಕೊಳ್ಳೋಣ.

(ವನಿತಾ ಚಂದ್ರಮೋಹನ್ ಕುಶಾಲನಗರ)