CRIME

ವಿಚ್ಛೇದನ ವಿಚಾರಣೆ ಬಳಿಕ ನಡು ರಸ್ತೆಯಲ್ಲಿ ಗುಂಡಿನ ದಾಳಿ: ಬೆಂಗಳೂರಿನಲ್ಲಿ ಪತಿಯಿಂದ, ಪತ್ನಿಯ ಹತ್ಯೆ

admincoorgdaily

Photo credit: TV09

ಬೆಂಗಳೂರು, ಡಿ. 23: ವಿಚ್ಛೇದನ ಸಂಬಂಧ ನ್ಯಾಯಾಲಯದ ವಿಚಾರಣೆ ಮುಗಿಸಿಕೊಂಡು ಹೊರಬಂದ ಬಳಿಕ ಪತಿಯೊಬ್ಬ ತನ್ನ ಪತ್ನಿಯನ್ನು ನಡು ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮಂಗಳವಾರ ಸಂಜೆ ಬಸವೇಶ್ವರನಗರದಲ್ಲಿ ನಡೆದಿದೆ. ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.

ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲಮುರಗನ್ ಘಟನೆ ಬಳಿಕ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭುವನೇಶ್ವರಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, ಬಾಲಮುರಗನ್ ಮತ್ತು ಭುವನೇಶ್ವರಿ 2011ರಲ್ಲಿ ವಿವಾಹವಾಗಿದ್ದು, ತಮಿಳುನಾಡಿನ ಸೇಲಂನಿಂದ ಬಂದು ರಾಜಾಜಿನಗರದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಬಾಲಮುರಗನ್ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಭುವನೇಶ್ವರಿ ಬ್ಯಾಂಕ್ ಉದ್ಯೋಗಿಯಾಗಿದ್ದರು.

ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದ ಬಾಲಮುರಗನ್, ಈ ವಿಚಾರವಾಗಿ ಆಗಾಗ್ಗೆ ಕಲಹ ಮಾಡುತ್ತಿದ್ದನು. ಇದರಿಂದ ಬೇಸತ್ತ ಭುವನೇಶ್ವರಿ 2024ರಲ್ಲಿ ಗಂಡನಿಂದ ದೂರವಾಗಿ ಕೆಪಿ ಅಗ್ರಹಾರಕ್ಕೆ ಸ್ಥಳಾಂತರಗೊಂಡು, ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಮಂಗಳವಾರ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ವಿಚಾರಣೆ ಮುಗಿಸಿಕೊಂಡು ಹೊರಬರುವಾಗ ದಂಪತಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಬಾಲಮುರಗನ್ ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದು ನಡು ರಸ್ತೆಯಲ್ಲೇ ಪತ್ನಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾತನಾಡಿ, ಆರೋಪಿಯು ಒಟ್ಟು ಐದು ಸುತ್ತು ಗುಂಡು ಹಾರಿಸಿದ್ದು, ಅವುಗಳಲ್ಲಿ ಎರಡು ಗುಂಡುಗಳು ತಲೆಗೆ ಹಾಗೂ ಎರಡು ಕೈಗೆ ತಗುಲಿವೆ. ದಾಳಿಯ ನಂತರ ಆರೋಪಿ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದರು.

ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾತನಾಡಿ, ಆರೋಪಿಯು ಒಟ್ಟು ಐದು ಸುತ್ತು ಗುಂಡು ಹಾರಿಸಿದ್ದು, ಅವುಗಳಲ್ಲಿ ಎರಡು ಗುಂಡುಗಳು ತಲೆಗೆ ಹಾಗೂ ಎರಡು ಕೈಗೆ ತಗುಲಿವೆ. ದಾಳಿಯ ನಂತರ ಆರೋಪಿ ಸ್ವಯಂವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದರು.

ಘಟನೆಗೆ ಬಳಸಲಾದ ಪಿಸ್ತೂಲ್‌ಗೆ ಪರವಾನಗಿ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾನೆಯೇ ಎಂಬ ಅಂಶದ ಮೇಲೂ ತನಿಖೆ ನಡೆಯುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.