CRIME

ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಪತ್ನಿಯ ಹತ್ಯೆಗೈದ ಪತಿ

admincoorgdaily

Photo credit: TV09(ಫೋಟೋ; ಗೋಪಿ&ಚಂದನಾಬಾಯಿ)

ಶಿವಮೊಗ್ಗ, ಜ.15: ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಡಿ.ಬಿ.ಹಳ್ಳಿಯ ಲಂಬಾಣಿ ಸಮುದಾಯದ ಚಂದನಾಬಾಯಿ ಹಾಗೂ ಪಂಡರಹಳ್ಳಿಯ ಬೋವಿ ಸಮಾಜದ ಗೋಪಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕೆಲಕಾಲ ತಲೆಮರೆಸಿಕೊಂಡಿದ್ದ ದಂಪತಿ ಬಳಿಕ ಊರಿಗೆ ಮರಳಿ ಸಂಸಾರ ನಡೆಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಈ ನಡುವೆ ಗೋಪಿಗೆ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಬೆಳೆದಿದ್ದು, ಆಕೆಯೊಂದಿಗೆ ಮದುವೆಗೆ ಮುಂದಾಗಿದ್ದನು ಎನ್ನಲಾಗಿದೆ. ಇದಕ್ಕೆ ಪತ್ನಿ ಚಂದನಾಬಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವಾಗಿ ದಂಪತಿಯ ನಡುವೆ ಆಗಾಗ ಕಲಹ ನಡೆಯುತ್ತಿತ್ತು.

ಜ.11ರಂದು ಮನೆಯಲ್ಲಿ ನಡೆದ ಜಗಳದ ವೇಳೆ ಗೋಪಿಯು ಪತ್ನಿಯ ಕತ್ತು ಹಿಸುಕಿ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ತನಗೂ ಕೊಲೆಗೆ ಸಂಬಂಧವಿಲ್ಲ ಎಂಬಂತೆ ವರ್ತಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ತನಿಖೆಯಲ್ಲಿ ಸತ್ಯಾಂಶ ಬಹಿರಂಗವಾಗಿದೆ.

ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತಂದೆಯ ಕೃತ್ಯದಿಂದಾಗಿ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.