ಬೆಂಗಳೂರಿನಲ್ಲಿ ಐಟಿ ದಾಳಿ: 100 ಕೋಟಿ ರೂ. ವಂಚಿಸಿದ್ದ ವಹಿವಾಟು ಬಯಲು
admincoorgdaily
ಬೆಂಗಳೂರು, ನ. 29: ನಗರದ ಕೆಲ ವ್ಯಾಪಾರಿಗಳು ಕಳೆದ 15 ದಿನಗಳಿಂದ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಇಲಾಖೆಗಳು ನಡೆಸಿದ ಜಂಟಿ ದಾಳಿಯಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ವಂಚಿಸಿದ್ದ ವಹಿವಾಟು ಪತ್ತೆಯಾಗಿದೆ. ಚಿಕ್ಕಪೇಟೆ, ಜೆಸಿ ರಸ್ತೆ, ಅವೆನ್ಯೂ ರಸ್ತೆ, ಬಿವಿಕೆ ರಸ್ತೆ, ಎಸ್‌ಪಿ ರೋಡ್ ಸೇರಿ ಕೇಂದ್ರ ಭಾಗದ 500 ಕ್ಕೂ ಹೆಚ್ಚು ಮಳಿಗೆ ಹಾಗೂ ಕಚೇರಿಗಳಲ್ಲಿ ಈ ಶೋಧ ನಡೆದಿದೆ.
ಎಲೆಕ್ಟ್ರಾನಿಕ್ಸ್, ವಾಹನ ಬಿಡಿಭಾಗಗಳು, ಗಿಫ್ಟ್ ಐಟಂಗಳು, ಒಣಹಣ್ಣುಗಳು ಸೇರಿದಂತೆ ಹಲವು ವಲಯಗಳಲ್ಲಿ ಬಿಲ್ ಇಲ್ಲದ ಖರೀದಿ–ಮಾರಾಟ, ನಕಲಿ ಬಿಲ್ ಬಳಕೆ ಮತ್ತು ಬಿಲ್ಲಿಗಿಂತ ಹೆಚ್ಚು ಪ್ರಮಾಣದ ಸರಕು ಖರೀದಿ ನಡೆದಿದೆ ಎಂಬುದು ಪರಿಶೀಲನೆಯಲ್ಲಿ ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಕಬ್ಬಿಣ, ಉಕ್ಕು, ಸಿಮೆಂಟ್ ಮತ್ತು ಹಾರ್ಡ್‌ವೇರ್ ವ್ಯಾಪಾರಿಗಳಲ್ಲಿ ನಕಲಿ ಬಿಲ್ ಜಾಲವನ್ನು ಬಳಸಿ ತೆರಿಗೆ ತಪ್ಪಿಸಿರುವುದು ಕೂಡ ಪತ್ತೆಯಾಗಿದೆ. ಗುತ್ತಿಗೆದಾರರಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ನಕಲಿ ಬಿಲ್ ವ್ಯವಸ್ಥೆ ರೂಪಿಸಿ ದುರುಪಯೋಗ ಮಾಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ವರ್ಷಕ್ಕೆ 40 ಲಕ್ಷ ರೂ. ಮೀರಿದ ವ್ಯವಹಾರ ಇದ್ದರೂ ಜಿಎಸ್‌ಟಿ ನೋಂದಣಿ ಮಾಡದೆ ವ್ಯವಹಾರ ಮುಂದುವರಿಸಿರುವ ಹಲವು ಘಟನಾವಳಿ ಪತ್ತೆಯಾಗಿವೆ. ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1,000 ಚೀಲ ಗುಟ್ಕಾ ಮತ್ತು ಪಾನ್ ಮಸಾಲಾ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಸರಿಯಾದ ಬಿಲ್ ಇಲ್ಲದೆ ಸಾಗಿಸುತ್ತಿದ್ದ 75 ಕಬ್ಬಿಣದ ಸ್ಕ್ರ್ಯಾಪ್ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.