ಸನಾತನ ಧರ್ಮ ಉಳಿಯಬೇಕಾದರೆ ಮಠ ಮಾನ್ಯಗಳು ಉಳಿಯಬೇಕು : ಶಾಸಕಿ ಭಾರತೀ ಶೆಟ್ಟಿ

Apr 5, 2026 - 16:46
 0  244
ಸನಾತನ ಧರ್ಮ ಉಳಿಯಬೇಕಾದರೆ ಮಠ ಮಾನ್ಯಗಳು ಉಳಿಯಬೇಕು : ಶಾಸಕಿ ಭಾರತೀ ಶೆಟ್ಟಿ

ಮನೆಹಳ್ಳಿ(ಆಲೂರುಸಿದ್ದಾಪುರ):- ಈ ಜಗತ್ತಿನಲ್ಲಿ ಸನಾತನ ಧರ್ಮ ಉಳಿಯಬೇಕಾದರೆ ಮಠಮಾನ್ಯಗಳು ಇರಬೇಕೆಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ.ಭಾರತಿ ಶೆಟ್ಟಿ ತಿಳಿದರು.

 ತಾಲೂಕಿನ ಶನಿವಾರಸಂತೆ ಸಮೀಪದ ಆಲೂರುಸಿದ್ದಾಪುರಬಳಿಯ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ೧೪ ನೇ ವರ್ಷದ ಶ್ರೀ ಗುರುಸಿದ್ಧವೀರೇಶ್ವರ ಮಹಾರಥೋತ್ಸವದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸದಾ ಅಸ್ತಿತ್ವದಲ್ಲಿರುವ ಜೀವನ ಮಾರ್ಗ ಇದು ಹಿಂದೂ ಧರ್ಮದ ಮೂಲಭೂತ ಮತ್ತು ಪ್ರಾಚೀನ ಹೆಸರಾಗಿದ್ದು, ಯಾವುದೇ ನಿರ್ದಿಷ್ಟ ಆರಂಭ ಅಥವಾ ಅಂತ್ಯವಿಲ್ಲದ, ನೈಸರ್ಗಿಕ ಕಾನೂನುಗಳು, ಕರ್ಮ, ಜ್ಞಾನ ಮತ್ತು ಭಕ್ತಿಯ ಮೇಲೆ ಆಧಾರಿತವಾದ ಸಾರ್ವತ್ರಿಕ ತತ್ವಗಳನ್ನು ಒಳಗೊಂಡಿದೆ. ಪ್ರಸ್ತುತ ಸಂದರ್ಭದಲ್ಲಿ ಮಠ ಮಾನ್ಯಗಳು ಧಾರ್ಮಿಕ ಚಿಂತನೆಯ ಜೊತೆಗೆ ಸಮಾಜ ಮುಖಿ ಚಿಂತನೆ ಹಾಗೂ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಬೆಳಸುತ್ತಿರುವುದು ಅತ್ಯಂತ ಸಂತಸದ ವಿಷಯ.

ಆ ನಿಟ್ಟಿನಲ್ಲಿ ಮಠ ಮಾನ್ಯಗಳು ಆಧ್ಯಾತ್ಮಕ ಕೇಂದ್ರಗಳಷ್ಟೆ ಅಲ್ಲ ಅವು ನೆಮ್ಮದಿಯ ತಾಣಗಳು ಕೂಡ ಆಗಿವೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಹೇಳಿದರು.

ಅವರು ಹಿಂದೂ ಧರ್ಮವನ್ನು ಅಳಿಸಿ ಹಾಕಲು ಸಾಕಷ್ಟು ಜನರು ದೇಶದ ಮೇಲೆ ದಾಳಿ ಮಾಡಿದರೂ ಸನಾತನ ಹಿಂದೂ ಧರ್ಮ ಜೀವಂತವಾಗಿರಲು ನಮ್ಮ ಪೂಜ್ಯರು ಕಾಪಾಡಿಕೊಂಡು ಬಂದಿರುವ ಧರ್ಮ ಪರಂಪರೆಯೇ ಕಾರಣವಾಗಿದೆ, ನಮ್ಮ ಸನಾತನ ಧರ್ಮದ ಸ್ವಾಭಿಮಾನದ ಸಂಕೇತವಾಗಿದೆ ಹಿಂದೂ ಧರ್ಮದಲ್ಲಿ ಹುಟ್ಟಿರುವ ನಾವುಗಳು ನಮ್ಮ ಸನಾತನ ಧರ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವಂತಹ ಕಾರ್ಯ ಮಾಡಬೇಕಿದೆ ಇಲ್ಲದಿದ್ದರೆ ನಮ್ಮ ಮೇಲೆ ಹಿಂದಿನಂತೆ ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಾ ಇರುತ್ತದೆ ಇದನ್ನು ನಿಲ್ಲಿಸಲು ಧರ್ಮ ಸಂಸ್ಕೃತಿ ಮಕ್ಕಳಲ್ಲಿ ಕಲಿಸುವ ಕಾರ್ಯ ತಂದೆ ತಾಯಂದಿರರು ಮಾಡಬೇಕು ಎಂದರು.

ಕೋಲಾರ ಜಿಲ್ಲಾ ನ್ಯಾಯಾಧೀಶರಾದ ಜಯಶ್ರ್ರೀ ಮಾತನಾಡಿ ಬೆಳ್ಳಿ, ಬಂಗಾರ, ಹಣ, ಆಸ್ತಿ ಇದಾವುದೂ ನಿಜವಾದ ಸಂಪತ್ತಲ್ಲ. ನಮಗೆ ಎಲ್ಲವನ್ನೂ ದಯಪಾಲಿಸಿರುವ ಭಗವಂತನ ಸ್ಮರಣೆಯೇ ನಿಜವಾದ ಸಂಪತ್ತು. ಭಗವಂತನ ಸ್ಮರಣೆುಂದ ಯಾವಾಗ ವಿಮುಖರಾಗುತ್ತೇವೆಯೋ ಅಂದೇ ಆಪತ್ತು ಎಂದರು.

 ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಮಠ-ಮಾನ್ಯಗಳು ಸಮಾಜದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳಾಗಿ ಉಳಿಯಬೇಕು ಎಂಬುದು ಅನೇಕರ ಅಭಿಪ್ರಾಯವಾಗಿದೆ.

 ಇವು ಶಾಂತಿ ನೆಲೆಸುವ ತಾಣಗಳಾಗಿದ್ದು, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಮೂಲ ಮಠ-ಮಾನ್ಯಗಳು, ಧರ್ಮಗುರುಗಳು ಯಥಾನುಸಾರ ಉಪದೇಶ ನೀಡಿ ನೈತಿಕ-ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುತ್ತಿದ್ದಾರೆ.

ಧಾರ್ಮಿಕ ಜಾಗೃತಿಯು ಹೆಚ್ಚುತ್ತಿರುವಾಗ ಸಂಬಂಧಗಳು ಹದಗೆಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದರು.

 ಮನೆಹಳ್ಳಿ ಮಠಾಧ್ಯಕ್ಷರಾದ ಶ್ರೀಶ್ರೀ ಮಹಾಂತಶಿವಲಿಂಗ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿ ಶ್ರೀಕ್ಷೇತ್ರ ಅಭಿವೃದ್ದಿ ಹೊಂದುತ್ತಾ ಸಾಗಿ ಬರುತ್ತಿರುವ ಬಗ್ಗೆ ವಿವರಣೆ ನೀಡಿ ಮಹಾರಥೋತ್ಸವ ಆಗಮಿಸಿದ್ದ ಗಣ್ಯರು ಹಾಗೂ ಭಕ್ತಾಧಿಗಳನ್ನು ಸ್ವಾಗತಿಸಿದರು.

ಈ ಸಂದರ್ಭ ಶ್ರೀ ಕ್ಷೇತ್ರಕ್ಕೆ ಸಹಕಾರ ನೀಡಿದ ಗಣ್ಯರಿಗೆ ಸನ್ಮಾನ ನಡೆಯಿತು. ವೇದಿಕೆಯಲ್ಲಿ ಅರಮೇರಿ ಕಳಂಚೇರಿ ಮಠಾಧ್ಯಕ್ಷರಾದ ಶ್ರೀಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠಾಧ್ಯಕ್ಷರಾದ ಶ್ರೀಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀಶ್ರೀ ಸದಾಶಿವ ಸ್ವಾಮೀಜಿ, ಕೆಸತೂರು ಮಠಾಧ್ಯಕ್ಷರಾದ ಶ್ರೀಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಹಿರಿಯ ಸಾಹಿತಿ ಮೋಹನ್‌ಪಾಳೇಗಾರ್,ಬೆಮ್ಮತ್ತಿ ಸುರೇಶ್, ಶಕ್ತಿ ದಿನಪತ್ರಿಕೆ ಮುಖ್ಯ ಸಂಪಾದಕ ಅನಂತಶಯನ, ಚಲನ ಚಿತ್ರ ನಟ ಧರ್ಮ,ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕೊಡಗು ವಿಶ್ವ ವಿಧ್ಯಾಲಯದ ಕನ್ನಡ ಉಪನ್ಯಾಸಕ ಜಮೀರ್ ಅಹಮದ್ ಇದ್ದರು.

 ಕಾರ್ಯಕ್ರಮದ ನಿರ್ವಹಣೆಯನ್ನು ಎಸ್ ಮಹೇಶ್ ವಹಿಸಿದ್ದರು.ಶಿಕ್ಷಕ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಸಾಂಸೃತಿಕ ವೇದಿಕೆಯಲ್ಲಿ ಭಕ್ತಿಗೀತೆಗಳು, ಶಾಸ್ರೀಯ ಸಂಗೀತ, ಭರತನಾಟ್ಯ, ಕೊಳಲುವಾದನ ಕಾರ್ಯಕ್ರಮ ನಡೆಯಿತು.

ಪ್ರತೀವರ್ಷದಂತೆ ಏಪ್ರಿಲ್ ತಿಂಗಳ ಹುಣ್ಣಿಮೆಯ ೨ನೇ ದಿನ ನಡೆಯುವ ೩ ದಿನಗಳ ದಾರ್ಮಿಕ ಆಚರಣೆಯಲ್ಲಿ ಸೂರ್ಯ ಚಂದ್ರ ಮಂಡಲೋತ್ಸವ, ಶ್ರೀಸ್ವಾಮಿಯ ಪಲ್ಲಕ್ಕಿ ಉತ್ಸವ, ಶ್ರೀ ವೀರಭದ್ರ ಸ್ವಾಮಿಯ ಕೆಂಡಕೊಂಡೋತ್ಸವಗಳು ನಡೆದು ಶನಿವಾರ ತಡರಾತಿ ಶ್ರದ್ಧಾಭಕ್ತಿಯಿಂದ ನಡೆದ ೧೪ ನೇ ವರ್ಷದ ಶ್ರೀ ಗುರುಸಿದ್ಧವೀರೇಶ್ವರ ಮಹಾರಥೋತ್ಸವ ಫಲ ಪುಷ್ಪಗಳಿಂದ ಅಲಂಕೃತ ರಥದಲ್ಲಿ ಶ್ರೀ ಸ್ವಾಮಿಯ ಪೀಟವನ್ನಿರಿಸಿ ಉತ್ಸವ ನಡೆಯಿತು. ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ, ಶ್ರೀ ತಪೋವನೇಶ್ವರಿ, ಚಲುವರಾಯಸ್ವಾಮಿಯ ಉತ್ಸವ ಮೂರ್ತಿಗಳೊಂದಿಗೆ ಯಶಳೂರಿನ ನಂದಿದ್ವಜ, ವೀರಗಾಸೆ , ದುಗ್ಗಳ ಹೊತ್ತ ಮಹಿಳೆಯರು ಉತ್ಸವಕ್ಕೆ ಮೆರುಗು ತಂದರು, ಶ್ರೀ ವೃಷಭಲಿಂಗೇಶ್ವರಸ್ವಾಮಿಯವರ ಸನ್ನಿದಾನದಲ್ಲಿ ಮಹಾಮಂಗಳಾರತಿ ನಡೆುತು.

 ಆಕಾಶದಲ್ಲಿ ವರ್ಣರಂಜಿತ ಪಟಾಕಿಗಳನ್ನು ಸಿಡಿಸಿ ಸಾವಿರಾರು ಭಕ್ತರ ಮೆಚ್ಚುಗೆಗಳಿಸಿದ್ದು ವಿಶೇಷವಾಗಿತ್ತು, ಉತ್ಸವದಲ್ಲಿ ಪಾಲ್ಗೋಂಡಿದ್ದ ಎಲ್ಲಾ ಭಕ್ತಾದಿಗಳಿಗೆ ಹೋಳಿಗೆ ಪಾಯಸ ಅನ್ನ ಪ್ರಸಾದ ಸಂತರ್ಪಣೆ ವ್ಯವಸ್ತೆ ಅಚ್ಚುಕಟ್ಟಾಗಿತ್ತು. ವಾಹನಗಳ ದಟ್ಟಣೆಯ ಸಂಚಾರ ವ್ಯವಸ್ಥೆಗೆ ಪೋಲೀಸ್ ಸಿಬ್ಭಂದಿಗಳು ಸೂಕ್ತ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0