ಶಕ್ತಿ ಗೋಪಾಲಕೃಷ್ಣ ಹೆಸರಿನ ರಸ್ತೆ ನಾಮಫಲಕ ಉದ್ಘಾಟನೆ

ಶಕ್ತಿ ಗೋಪಾಲಕೃಷ್ಣ ಹೆಸರಿನ ರಸ್ತೆ ನಾಮಫಲಕ ಉದ್ಘಾಟನೆ

ಮಡಿಕೇರಿ:-ನಗರದ ಪತ್ರಿಕಾ ಭವನದಿಂದ ಜಿಲ್ಲಾ ಕೈಗಾರಿಕಾ ಕಚೇರಿ ವರೆಗಿನ ರಸ್ತೆಗೆ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರ ಹೆಸರನ್ನು ಬುಧವಾರ ಇಡಲಾಯಿತು. ಈ ಸಂಬಂಧ ಗೋಪಾಲಕೃಷ್ಣ ಅವರ ಹೆಸರಿನ ನಾಮಫಲಕವನ್ನು ಶಾಸಕರಾದ ಡಾ.ಮಂತರ್ ಗೌಡ ಅವರು ಬುಧವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರು ಕೊಡಗು ಪತ್ರಿಕೋದ್ಯಮದ ಭೀಷ್ಮರಾಗಿದ್ದಾರೆ. ಶಕ್ತಿ ದಿನಪತ್ರಿಕೆಯನ್ನು ಆರಂಭಿಸುವ ಮೂಲಕ ಇಂದಿಗೂ ಸಹ ಕೊಡಗು ಜಿಲ್ಲೆಯಲ್ಲಿ ಶಕ್ತಿ ದಿನಪತ್ರಿಕೆ ಶಕ್ತಿಯಾಗಿ ಉಳಿದಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದೆ ಪತ್ರಿಕೆಯನ್ನು ಹೊರತರುವುದು ಕಷ್ಟಸಾಧ್ಯವಾಗಿತ್ತು. ಅಚ್ಚು ಮೊಳೆಯ ಮೂಲಕ ಪತ್ರಿಕೆಯನ್ನು ಮುದ್ರಣ ಮಾಡುತ್ತಿದ್ದರು. ಅಂದಿನ ಕಷ್ಟದ ಸಂದರ್ಭದಲ್ಲಿಯೂ ಪತ್ರಿಕೆಯನ್ನು ನಡೆಸಿ ಇಂದಿಗೂ ಸಹ ಕೊಡಗು ಜಿಲ್ಲೆಯಲ್ಲಿ ತಮ್ಮದೇ ಆದ ಸ್ಥಾನ ಉಳಿಸಿಕೊಂಡು ಜನಮನ್ನಣೆ ಗಳಿಸುವುದು ಮೆಚ್ಚುವಂತದ್ದು ಎಂದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಅವರು ಮಾತನಾಡಿ ಕೊಡಗು ಪತ್ರಿಕಾ ರಂಗದಲ್ಲಿ ಶಕ್ತಿ ದಿನಪತ್ರಿಕೆಯನ್ನು ಪ್ರತಿನಿತ್ಯ ಓದುವಂತೆ ಜನ ಮಾನಸದಲ್ಲಿದೆ. ಆ ನಿಟ್ಟಿನಲ್ಲಿ ಶಕ್ತಿ ದಿನಪತ್ರಿಕೆ ಶಕ್ತಿಯಾಗಿ ಉಳಿದು ಬೆಳೆದಿದೆ. ಇನ್ನೂ ಬೆಳೆಯುತ್ತದೆ ಎಂದು ಹೇಳಿದರು. ಗೋಪಾಲಕೃಷ್ಣ ಅವರ ಹೆಸರು ಇಡಲಾಗಿರುವ ರಸ್ತೆಯನ್ನು ಇನ್ನಷ್ಟು ಸುಧಾರಣೆ ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಶಕ್ತಿ ದಿನಪತ್ರಿಕೆಯು ತನ್ನದೇ ಆದ ಸ್ಥಾನ ಉಳಿಸಿಕೊಂಡು ಜಿಲ್ಲೆಯಲ್ಲಿ ಓದುಗರನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು. ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರ ಹೆಸರು ಇಡಬೇಕು ಎಂದು ಮನವಿ ಮಾಡಿದಂತೆ ನಗರಸಭೆಯಲ್ಲಿ ತೀರ್ಮಾನಿಸಿ ಇಂದು ಹೆಸರು ಇಡಲಾಗಿದೆ. ಇದೊಂದು ಉತ್ತಮ ಕೆಲಸ ಎಂದು ಅವರು ಹೇಳಿದರು.

ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಹಾಗೂ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ಮಾತನಾಡಿದರು ಗೋಪಾಲಕೃಷ್ಣ ಅವರ ಧರ್ಮಪತ್ನಿ ರಾಜಲಕ್ಷ್ಮಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪೌರಾಯುಕ್ತರಾದ ಎಚ್.ಆರ್.ರಮೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನಿಲ್ ಎಚ್.ಟಿ., ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ನಗರಸಭೆ ಸದಸ್ಯರು, ಶಕ್ತಿ ಅಭಿಮಾನಿಗಳು ಇತರರು ಪಾಲ್ಗೊಂಡಿದ್ದರು.