ಏಷ್ಯಾಕಪ್ ಚಾಂಪಿಯನ್ ಆದ್ರೂ ಭಾರತಕ್ಕಿಲ್ಲ ಟ್ರೋಫಿ! ಯಾಕೆ ಗೊತ್ತೇ!
admincoorgdaily
ದುಬೈ: ಏಷ್ಯಾ ಕಪ್ ಕ್ರಿಕೆಟ್ ಫೈನಲ್ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ಕ್ರಿಕೆಟ್ ತಂಡವು ನಿರಾಕರಿಸಿದೆ. ಭಾರತ ತನ್ನ ಐತಿಹಾಸಿಕ ವಿಜಯವನ್ನು ಟ್ರೋಫಿಯಿಲ್ಲದೆ ಸಂಭ್ರಮಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಆಟಗಾರರು ಪದಕಗಳನ್ನು ಧರಿಸದೆ, ನಾಯಕ ಸೂರ್ಯಕುಮಾರ್ ಯಾದವ್ ಟ್ರೋಫಿಯನ್ನು ಸ್ವೀಕರಿಸದೆ ವೇದಿಕೆಯಿಂದ ಮರಳಿದರು.
ಪಾಕಿಸ್ತಾನದಲ್ಲಿ ಮೊಹ್ಸಿನ್ ನಖ್ವಿ ಸಚಿವ ಸ್ಥಾನದಲ್ಲಿರುವುದು ಹಾಗೂ ಪಂದ್ಯಾವಳಿಯ ವೇಳೆಯಲ್ಲಿನ ಅವರ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಇದು ಸಂಪೂರ್ಣವಾಗಿ ತಂಡದ ನಿರ್ಧಾರ. ಯಾರೂ ನಮಗೆ ಹೀಗೆ ಮಾಡಲು ಹೇಳಿರಲಿಲ್ಲ. ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸದಿರಲು ನಾವು ಒಮ್ಮತವಾಗಿ ತೀರ್ಮಾನಿಸಿದ್ದೇವೆ. ಗೆದ್ದ ತಂಡಕ್ಕೆ ಟ್ರೋಫಿ ನೀಡದಿರುವುದು ಕ್ರಿಕೆಟ್ ಇತಿಹಾಸದಲ್ಲೇ ಅಪರೂಪ,” ಎಂದು ನಾಯಕ ಸೂರ್ಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. “ನಮ್ಮ ನಿಜವಾದ ಟ್ರೋಫಿಗಳು ಆಟಗಾರರು ಮತ್ತು ನಮ್ಮ ಸಿಬ್ಬಂದಿ. ಅವರೊಂದಿಗೆ ಕಳೆದ ಕ್ಷಣಗಳೇ ಶಾಶ್ವತ ನೆನಪು,” ಎಂದು ವಿವರಿಸಿದರು.
ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಭಾರತ ತಂಡದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಭಾರತ ನಮ್ಮೊಂದಿಗೆ ಕೈಕುಲುಕಲಿಲ್ಲ, ಟ್ರೋಫಿ ಸ್ವೀಕರಿಸಲಿಲ್ಲ. ಇದು ನಮಗಷ್ಟೇ ಅಲ್ಲ, ಕ್ರಿಕೆಟ್ ಕ್ರೀಡೆಯನ್ನೇ ಅವಮಾನಿಸುವ ನಡವಳಿಕೆ. ಕ್ರಿಕೆಟಿಗರು ಮಾದರಿಯಾಗಿರಬೇಕು, ಮೈದಾನದಲ್ಲಿ ಇಂತಹ ವರ್ತನೆ ಅಸಮಂಜಸ,” ಎಂದು ಅವರು ಟೀಕಿಸಿದರು.
ಪ್ರದಾನ ಸಮಾರಂಭಕ್ಕೂ ಮುನ್ನ ಎಸಿಸಿಸಿ ಅಧಿಕಾರಿಗಳು ಟ್ರೋಫಿಯನ್ನು ಮೈದಾನದಿಂದ ತೆಗೆದುಕೊಂಡು ಹೋದರು. ಒಂದು ಹಂತದಲ್ಲಿ, ನಖ್ವಿ ಟ್ರೋಫಿ ನೀಡಲು ಒತ್ತಾಯಿಸಿದರೆ ತಂಡ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಆಟಗಾರರು ಎಚ್ಚರಿಕೆ ನೀಡಿದ್ದರು. ಅಂತಿಮವಾಗಿ, ಟ್ರೋಫಿಯಿಲ್ಲದೆ ಆಟಗಾರರ ಸಂಭ್ರಮಾಚರಣೆ ನಡೆಯಿತು.
ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್ ಗಳಿಂದ ಮಣಿಸಿತು. ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರ ಸ್ಪಿನ್ ಬೌಲಿಂಗ್ ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು. ತಿಲಕ್ ವರ್ಮಾ ಅಜೇಯ 69 ರನ್‌ಗಳಿಸಿ ಭಾರತದ ಗೆಲುವಿಗೆ ಕಳಶವಿಟ್ಟರು.