ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪ್ ; ಬೆಳೆಗಾರ ದುರ್ಮರಣ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಜೀಪೊಂದು ನಿಯಂತ್ರಣ ತಪ್ಪಿ ಕಾಫಿ ತೋಟದೊಳಗೆ ಪಲ್ಟಿಯಾಗಿ ಬೆಳೆಗಾರರೊಬ್ಬರು ದುರ್ಮರಣಕ್ಕೀಡಾದ ಘಟನೆ ನಾಪೋಕ್ಲು ಬಳಿಯ ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ನಡೆದಿದೆ.
ಪೇರೂರು ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಬೊಟ್ಟೋಳಂಡ ಶರಿ ಮೇದಪ್ಪ (54) ಮೃತ ದುರ್ದೈವಿಯಾಗಿದ್ದಾರೆ. ಶನಿವಾರ ರಾತ್ರಿ ತಮ್ಮ ತೋಟದಿಂದ ಜೀಪಿನಲ್ಲಿ ಸೌದೆ ತುಂಬಿ ಕಾರ್ಮಿಕರೊಂದಿಗೆ ಮನೆಗೆ ಹಿಂತಿರುಗುವ ವೇಳೆ ಇಳಿಜಾರು ರಸ್ತೆಯಲ್ಲಿ ಶರಿ ಮೇದಪ್ಪ ಅವರು ಚಲಾಯಿಸುತ್ತಿದ್ದ ಜೀಪ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಅವಘಡದಿಂದ ಶರಿಮೇದಪ್ಪ ಅವರ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಏಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಜೀಪಿನಲ್ಲಿದ್ದ ಕಾರ್ಮಿಕರಿಬ್ಬರು ಅವಘಡ ಸಂದರ್ಭ ಹೊರಜಿಗಿದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.