State News

ವಾರದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವೃತ್ತಿ, ವಾರಾಂತ್ಯದಲ್ಲಿ ಕಳ್ಳತನದ ಪ್ರವೃತ್ತಿ, ಕನ್ನಡ ಪ್ರಾಧ್ಯಾಪಕಿ ಬಂಧನ

admincoorgdaily

Photo credit: TV09

ಬೆಂಗಳೂರು, ಡಿ. 23: ಖಾಸಗಿ ಕಾಲೇಜಿನಲ್ಲಿ ಕನ್ನಡ ಪಠ್ಯ ಬೋಧಿಸುತ್ತಿದ್ದ ಮಹಿಳೆಯೊಬ್ಬರು ಮದುವೆ ಚೌಟ್ರಿಗಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಕಳ್ಳತನ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ರೇವತಿ ಎಂದು ಗುರುತಿಸಲಾಗಿದೆ. ಬೆಳ್ಳಂದೂರು ಸಮೀಪದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಾರದ ದಿನಗಳಲ್ಲಿ ಕಾಲೇಜು ಕೆಲಸ ಹಾಗೂ ವಾರಾಂತ್ಯಗಳಲ್ಲಿ ಮದುವೆ ಸಮಾರಂಭಗಳಿಗೆ ಹಾಜರಾಗಿ ಕಳ್ಳತನ ನಡೆಸುತ್ತಿದ್ದಳು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಮದುವೆಗೆ ಆಗಮಿಸಿ ಸಂಬಂಧಿಕರಂತೆ ವರ್ತಿಸಿ ಚೌಟ್ರಿಗಳೊಳಗೆ ಪ್ರವೇಶಿಸುತ್ತಿದ್ದ ಆರೋಪಿತೆ, ಆತಿಥ್ಯ ಪಡೆದು ಯಾರಿಗೂ ಅನುಮಾನ ಬರದಂತೆ ಮಹಿಳೆಯರ ಚಿನ್ನಾಭರಣಗಳನ್ನು ಕಳವು ಮಾಡಿ ಸ್ಥಳ ತೊರೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನದ ಬಳಿಕ ಮದುವೆ ಊಟ ಸೇವಿಸಿ ನಿರ್ಲಿಪ್ತವಾಗಿ ಹೊರಟು ಹೋಗುತ್ತಿದ್ದಳು ಎಂಬುದೂ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ ಕಲ್ಯಾಣಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ತನಿಖೆಯ ವೇಳೆ ಆರೋಪಿಯ ಪಾತ್ರ ಪತ್ತೆಯಾಗಿದೆ. ರೇವತಿ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೆ.ಆರ್. ಪುರಂನಲ್ಲಿ ವಾಸವಿದ್ದಳು ಎಂದು ತಿಳಿದು ಬಂದಿದೆ.

ವಿಚಾರಣೆ ವೇಳೆ ಒಟ್ಟು ಮೂರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯು ಭಾಗಿಯಾಗಿರುವುದು ದೃಢಪಟ್ಟಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.