ಕಟ್ಟೆಪುರ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ‌ ; ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕ ರೊಂದಿಗೆ ಪೋಷಕರ ಪಾತ್ರ ಕೂಡ ದೊಡ್ಡದು : ಮಿಲನ ಭರತ್

Jan 29, 2026 - 11:54
 0  176
ಕಟ್ಟೆಪುರ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ‌ ; ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕ ರೊಂದಿಗೆ ಪೋಷಕರ ಪಾತ್ರ ಕೂಡ ದೊಡ್ಡದು : ಮಿಲನ ಭರತ್

ಶನಿವಾರಸಂತೆ : ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಜವಾಬ್ದಾರಿ ಕೂಡ ತುಂಬ ಮಹತ್ವದಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಹೇಳಿದರು.

 ಸಮೀಪದ ಬೇಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ,

ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು.ರಾಷ್ಟ್ರನಾಯಕರು,ಮಹಾನ್ ಸಾಧಕ ವ್ಯಕ್ತಿಗಳ ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಿಬೇಕು ಎಂದು ಹೇಳಿದರು. ವಿದ್ಯೆ ಮನುಷ್ಯನನ್ನು ಬಾಳಿ ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

 ಅಳುವಾರ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಪ್ರೊಫೆಸರ್ ಧರ್ಮಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ತುಂಬ ಅಗತ್ಯವಾಗಿದೆ ಎಂದು ಹೇಳಿದರು. ಪೋಷಕರು ತಮ್ಮ ಮಕ್ಕಳ ಪ್ರೌಢಶಿಕ್ಷಣ ಮುಗಿದ ನಂತರ ಪಿಯುಸಿ ವ್ಯಾಸಂಗಕ್ಕೆ ಪಟ್ಟಣ ಹಾಗೂ ನಗರ ಪ್ರದೇಶದ ಉತ್ತಮ ಕಾಲೇಜು ಗಳಿಗೆ ಸೇರಿಸಿ ಅವರಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಚಿಂತನೆ ಹರಿಸಬೇಕು ಎಂದರು.

 ಕಾರ್ಯಕ್ರಮ ಉದ್ಘಾಟಿಸಿದ ಬೇಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕಮಲಮ್ಮ ಮಾತನಾಡಿ,ವಾರ್ಷಿಕೋತ್ಸವಕ್ಕೆ ಶುಭಹಾರೈಸಿದರು.ಗ್ರಾಮಸ್ಥರು ಹಾಗೂ ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

 ಸಂಪನ್ಮೂಲ ವ್ಯಕ್ತಿ ಜಯಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ಹವ್ಯಾಸಗಳನ್ನು ಕಲಿಸುವತ್ತ ಗಮನ ಹರಿಸಬೇಕು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವಾಗಿದ್ದು,ಉತ್ತಮ ಪರಿಸರದಲ್ಲಿ ಮಕ್ಕಳು ಬೆಳೆಯುವಂತ ವಾತಾವರಣ ನಿರ್ಮಿಸಬೇಕು ಎಂದರು. ಕಾಫಿ ಬೆಳೆಗಾರ ಯತೀಶ್ ಮಾತನಾಡಿ,ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ.ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿಸುವಂತೆ ಒತ್ತು ನೀಡಬೇಕು ಎಂದರು.

 ಶಾಲೆಯ ಶಿಕ್ಷಕಿ ಎಚ್.ಪಿ.ತೇಜಾವತಿ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿ ಶಾಲೆಯ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳನ್ನು ಹಂಚಿಕೊಂಡರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕ ಎಂ.ಸಿ.ಧರ್ಮರಾಜ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸೌಮ್ಯ, ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಘಟಕದ ನಿರ್ದೇಶಕ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಕವಿತಾ,ಕೊಡ್ಲಿಪೇಟೆ ಶಿಕ್ಷಕ ಕೆ.ಎನ್.ಕಿರಣ್ ಕುಮಾರ್,ಮುಳ್ಳುರು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸತೀಶ್,ಸಹ ಶಿಕ್ಷಕ ಜಾನ್,ಸಿ. ಆರ್.ಪಿ.ಮುರುಳೀಧರ್,ದಾನಿಗಳಾದ ಎನ್.ಎನ್.ಧರ್ಮಪ್ಪ ,ಮಹೇಶ್,ಸಿದ್ದಪ್ಪ, ತೋಪೇಗೌಡ,ಜವರಯ್ಯ,ಗೋಪಾಣ್ಣ,ಪುಟ್ಟರಾಜು,ಎಚ್.ಬಿ.ಧರ್ಮಪ್ಪ, ಸುವರ್ಣ,ಅಪ್ಪಾಜಿ ,ಮಹೇಶಾಚಾರಿ,ರತ್ನಮ್ಮ ಸುರೇಶ್ ಪಾಲ್ಗೊಂಡಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭರತನಾಟ್ಯ, ಜಾನಪದ ನೃತ್ಯ ಹಾಗೂ ಸಮೂಹ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ರಂಜಿಸಿದರು.ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.

ಪೋಷಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದರು.ಇದೇ ಸಂದರ್ಭ ದಾನಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಅತಿಥಿಗಳನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಮೊದಲಿಗೆ ಗ್ರಾಮಸ್ಥರಿಗೆ ನಡೆದ ಕಬಡ್ಡಿ ಕ್ರೀಡಾಕೂಟ ಕ್ರೀಡಾಭಿಮಾನಿಗಳ ಮನ ರಂಜಿಸಿತು.ಕಾಫಿ ಬೆಳೆಗಾರ ಯತೀಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0