ಮೋಜು–ಮಸ್ತಿಗಾಗಿ ದರೋಡೆಗೆ ಇಳಿದಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸ್ ಬಲೆಗೆ

ಮೋಜು–ಮಸ್ತಿಗಾಗಿ ದರೋಡೆಗೆ ಇಳಿದಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸ್ ಬಲೆಗೆ
Photo credit: TV09

ರಾಮನಗರ, ನ. 28: ಮೋಜು–ಮಸ್ತಿ ಜೀವನಕ್ಕಾಗಿ ಅಪ್ರಾಪ್ತ ಬಾಲಕಿಯರನ್ನು ಬಳಸಿ ಕಳ್ಳತನ, ದರೋಡೆ ನಡೆಸುತ್ತಿದ್ದ ಎಂಟು ಸದಸ್ಯರ ಗ್ಯಾಂಗ್‌ನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿದಂತೆ ಒಟ್ಟು ಎಂಟು ಮಂದಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳು ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 18ರ ರಾತ್ರಿ ಕೆ.ಆರ್. ಮಾರುಕಟ್ಟೆ ಬಳಿಯಿಂದ ವಿಮಾನ ನಿಲ್ದಾಣಕ್ಕೆ ಹೋಗುವುದಾಗಿ ಹೇಳಿ ಆ್ಯಪ್ ಮೂಲಕ ಚಾಲಕ ಸ್ವಾಮಿಗೌಡ ಅವರ ಕ್ಯಾಬ್ ಬುಕ್ ಮಾಡಿದ ಆರೋಪಿಗಳು ಪಿಕಪ್ ಆದ ಬಳಿಕ ಯೋಜನೆ ಬದಲಿಸಿದರು. “ಹೆಚ್ಚು ಹಣ ಕೊಡುತ್ತೇವೆ, ಬಿಡದಿಯವರೆಗೆ ಡ್ರಾಪ್ ಮಾಡಿ” ಎಂದು ಮನವಿ ಮಾಡಿ ಚಾಲಕನನ್ನು ಜೋಗನಪಾಳ್ಯ ಗ್ರಾಮದವರೆಗೆ ಕರೆತಂದರು.

ಸ್ಥಳಕ್ಕಾಗುತ್ತಿದ್ದಂತೆ ಕಾರು ನಿಲ್ಲಿಸಿದ ಚಾಲಕನ ಮೇಲೆ ರಾಡ್‌ನಿಂದ ದಾಳಿ ನಡೆಸಿ, ಕಾರು ಸಮೇತ ಆರೋಪಿಗಳು ಪರಾರಿಯಾದರು. ಚಾಲಕ ಸ್ವಾಮಿಗೌಡ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಯಿತು.

ಪ್ರಕರಣದ ತನಿಖೆ ಮಾಡಿದ ಬಿಡದಿ ಪೊಲೀಸರು GPS‌ನ್ನು ಹಿಂಬಾಲಿಸಿ ಚಿತ್ರದುರ್ಗದ ಬಳಿಯಲ್ಲಿ ಗ್ಯಾಂಗ್‌ನ ಎಲ್ಲ ಎಂಟು ಸದಸ್ಯರನ್ನೂ ಬಂಧಿಸಿದರು. ಮೈಸೂರು ಮೂಲದ ಸದ್ದಾಂ, ಕಬೀರ್, ಯಶವಂತ್ ಮತ್ತು ಶಿವಪ್ರಸಾದ್‌ ಸೇರಿದಂತೆ ನಾಲ್ವರು ಅಪ್ರಾಪ್ತ ಬಾಲಕಿಯರು ಗ್ಯಾಂಗ್‌ ನಲ್ಲಿದ್ದರು ಎಂದು ತಿಳಿದು ಬಂದಿದೆ.

ತನಿಖೆಯಲ್ಲಿ, ಮೋಜು–ಮಸ್ತಿ ನಡೆಸಲು ಹಣ ಸಂಪಾದಿಸುವ ಉದ್ದೇಶದಿಂದ ಬಾಲಕಿಯರನ್ನು ಬಳಸಿ ದರೋಡೆ, ಕಳ್ಳತನ ನಡೆಸುತ್ತಿದ್ದುದು ಬಯಲಾಗಿದೆ. ಬಿಡದಿ, ಕನಕಪುರ, ಚನ್ನಪಟ್ಟಣ, ಮಳವಳ್ಳಿ, ಶಿವಮೊಗ್ಗ ಹಾಗೂ ಶ್ರೀರಂಗಪಟ್ಟಣ ಪ್ರದೇಶಗಳಲ್ಲಿ ಹಲವು ಪ್ರಕರಣಗಳಲ್ಲಿ ಇವರ ಕೈಚಳಕ ಬೆಳಕಿಗೆ ಬಂದಿದೆ.

ಬಂಧಿತರ ಬಳಿಯಿಂದ ಪೊಲೀಸರು ₹16 ಲಕ್ಷ ಮೌಲ್ಯದ ಮೂರು ಕಾರು, ಆರು ದ್ವಿಚಕ್ರ ವಾಹನ, ಒಂದು ಆಟೋ ಹಾಗೂ ದರೋಡೆಗೆ ಬಳಸಿದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಗ್ಯಾಂಗ್ ಇತರ ಅಪರಾಧಗಳಲ್ಲಿ ತೊಡಗಿಕೊಂಡಿದೆಯೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.