ಅಪಹರಣಕ್ಕೊಳಗಾದ ಚಿನ್ನದ ವ್ಯಾಪಾರಿ ಶವವಾಗಿ ಪತ್ತೆ; 5 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ ಖದೀಮರು
ವಿಜಯನಗರ, ಅ. 17: ಹೂವಿನ ಹಡಗಲಿ ತಾಲ್ಲೂಕಿನ ಹೊಳಲು ಗ್ರಾಮದ ವ್ಯಾಪಾರಿ ಮಂಜುನಾಥ ಶೇಜವಾಡಕರ್ (58) ಅವರ ಅಪಹರಣ ಪ್ರಕರಣಕ್ಕೆ ದುಃಖಾಂತ್ಯ ಕಂಡಿದೆ. ಅಕ್ಟೋಬರ್ 10ರಂದು ಕಾಣೆಯಾಗಿದ್ದ ಮಂಜುನಾಥರ ಮೃತ ದೇಹ ಗುರುವಾರ ಹರವಿ–ಬಸಾಪುರ ಗ್ರಾಮದ ಸಮೀಪ ತುಂಗಭದ್ರಾ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹೊಳಲು ಗ್ರಾಮದ ಮಲ್ಲಿಕಾರ್ಜುನ ಉಜ್ಜಮ್ಮನವರ (27) ಮತ್ತು ಯೋಗೇಶ್ ಅಂಗಡಿ (25) ಅವರನ್ನು ಮಹಾರಾಷ್ಟ್ರದ ಪುಣೆಯಿಂದ ವಿಜಯನಗರ ಜಿಲ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಲೆಮಾಡಿ ಶವ ಎಸೆದಿರುವ ಕುರಿತು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಪಹರಣಕಾರರು ಮಂಜುನಾಥ್ ಅವರ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ ಕಾರಿನ ಡಿಕ್ಕಿಯಲ್ಲಿಟ್ಟು ಇಡೀ ದಿನ ಸುತ್ತಾಡಿದ್ದಾರೆ ಎನ್ನಲಾಗಿದೆ. ಉಸಿರು ಕಟ್ಟಿ ಮಂಜುನಾಥ್ ಅವರು ಮೃತಪಟ್ಟ ನಂತರ, ಮೃತದೇಹವನ್ನು ಹರವಿ ಸೇತುವೆ ಮೇಲಿಂದ ತುಂಗಭದ್ರಾ ನದಿಗೆ ಎಸೆದು ಪರಾರಿಯಾಗಿದ್ದಾರೆ ಎಂದು ಆರೋಪಿಗಳು ಹೇಳಿದ್ದಾರೆ.
ಅ. 10ರ ಬೆಳಿಗ್ಗೆ ಮೈಲಾರ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಂಜುನಾಥ ಅವರನ್ನು ಆರೋಪಿಗಳು ಅಪಹರಿಸಿದ್ದರು. ಬಳಿಕ ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಮಂಜುನಾಥ್ ಅವರ ಅಕ್ಕ ಡಾ. ಮಂಜುಳಾ ಶೇಜವಾಡಕರ್ ಅವರಿಗೆ ವಾಟ್ಸಾಪ್ ಕರೆಮೂಲಕ ₹5 ಕೋಟಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ಸಾಧ್ಯವಿಲ್ಲವೆಂದಾಗ ಕೊಲೆ ಬೆದರಿಕೆ ಹಾಕಿ ಸಂಪರ್ಕ ಕಡಿತಗೊಳಿಸಿದ್ದರು.
ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದು ತಿಳಿದ ತಕ್ಷಣ, ಭಯಗೊಂಡ ಅಪಹರಣಕಾರರು ಮಂಜುನಾಥ್ ಅವರನ್ನು ಕಾರಿನ ಡಿಕ್ಕಿಯೊಳಗೆ ಬಚ್ಚಿಟ್ಟು ಊರಿಡೀ ಸುತ್ತಾಡಿದ್ದರು. ಆ ಸಂದರ್ಭದಲ್ಲಿ ಮಂಜುನಾಥ್ ಅವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಮಂಜುನಾಥ ಶೇಜವಾಡಕರ್ ಅವರು ಇತ್ತೀಚೆಗೆ ಚಿನ್ನಾಭರಣ ವ್ಯಾಪಾರ ಕೈಬಿಟ್ಟು, ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಚಿನ್ನಾಭರಣ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿಯ ಜೊತೆಗೆ 9ನೇ ಹಾಗೂ 4ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಪುತ್ರರು ಇದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್‌ಐ ಭರತ್ ಪ್ರಕಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಹಿರೇಹಡಗಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮುಂದುವರಿದಿದೆ.