ಮದುವೆಗೆ ನಿರಾಕರಿಸಿದ ವಿದ್ಯಾರ್ಥಿನಿಯ ಕಿಡ್ನಾಪ್ ಪ್ರಕರಣ: 12 ಗಂಟೆಗಳಲ್ಲಿ ಐವರು ಆರೋಪಿಗಳ ಬಂಧನ

Oct 13, 2025 - 16:01
 0  1.9k
ಮದುವೆಗೆ ನಿರಾಕರಿಸಿದ ವಿದ್ಯಾರ್ಥಿನಿಯ ಕಿಡ್ನಾಪ್ ಪ್ರಕರಣ: 12 ಗಂಟೆಗಳಲ್ಲಿ ಐವರು ಆರೋಪಿಗಳ ಬಂಧನ
Photo credit: Etv bharath

ಬೆಂಗಳೂರು, ಅ.13: ಮದುವೆಗೆ ನಿರಾಕರಿಸಿದ ವಿದ್ಯಾರ್ಥಿನಿಯ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆಕೆಯನ್ನು ಅಪಹರಿಸಿದ್ದ ಐವರ ಗುಂಪನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಕೃತ್ಯ ನಡೆದ ಕೇವಲ 12 ಗಂಟೆಗಳೊಳಗೆ ಪತ್ತೆಹಚ್ಚಿ ಬಂಧಿಸಿದ್ದಾರೆ. ಅಪಹರಣಕ್ಕೊಳಗಾದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಬಂಧಿತರಾದವರು ರಂಗನಾಥ್, ರಾಜೇಶ್, ಚಂದನ್, ಶ್ರೇಯಸ್ ಹಾಗೂ ಮಂಜುನಾಥ್. ಕೃತ್ಯಕ್ಕೆ ಬಳಸಿದ ಆಟೋ ಮತ್ತು ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

 ಈ ಕಾರ್ಯಾಚರಣೆಯನ್ನು ಇನ್ಸ್‌ಪೆಕ್ಟರ್ ರಾಜು ಎಂ.ಎಸ್. ಅವರ ನೇತೃತ್ವದ ತಂಡ ಕ್ಷಿಪ್ರವಾಗಿ ಯಶಸ್ವಿಗೊಳಿಸಿದೆ.

 ಚಿಕ್ಕಲ್ಲಸಂದ್ರ ಪ್ರದೇಶದಲ್ಲಿ ವಾಸವಿದ್ದ ತಾಯಿ-ಮಗಳ ಮೇಲೆ ಈ ದಾಳಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಸಿಎ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ಯುವತಿ ಅಕ್ಟೋಬರ್ 8ರ ಸಂಜೆ ತಾಯಿಯೊಂದಿಗೆ ಮನೆಯಲ್ಲಿ ಇದ್ದಳು. ಈ ವೇಳೆ ಆರೋಪಿ ರಂಗನಾಥ್ ಮತ್ತು ಅವನ ಸಹಚರರು ಏಕಾಏಕಿ ಮನೆಗೆ ನುಗ್ಗಿ, ಮಾರಕಾಸ್ತ್ರಗಳಿಂದ ಬೆದರಿಸಿ ಯುವತಿಯನ್ನು ಆಟೋದಲ್ಲಿ ಎಳೆದೊಯ್ದರು. ತಡೆಯಲು ಯತ್ನಿಸಿದ ತಾಯಿಯ ಮೇಲೆಯೂ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾದರು.

 ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ತನಿಖೆ ಕೈಗೊಂಡು, ತಾಂತ್ರಿಕ ಆಧಾರದ ಮೇಲೆ ಆರೋಪಿಗಳ ಗುರುತು ಪತ್ತೆಹಚ್ಚಿ, ತಮಿಳುನಾಡಿನಲ್ಲಿ ಬಂಧಿಸಿದರು. ಬಳಿಕ ಅವರನ್ನು ನಗರಕ್ಕೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಸೂತ್ರಧಾರಿ ರಂಗನಾಥ್ ಬೈಕ್ ಮೆಕ್ಯಾನಿಕ್ ಆಗಿದ್ದು, 2024ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಆರು ತಿಂಗಳ ಹಿಂದೆ ಜಾಮೀನು ಪಡೆದು ಬಿಡುಗಡೆಯಾದ ಆತ, ಯುವತಿಯೊಂದಿಗೆ ಮದುವೆಯ ವಿಚಾರವಾಗಿ ನಿರಂತರ ಒತ್ತಡ ಹೇರುತ್ತಿದ್ದ. ಎರಡು ಬಾರಿ ಯುವತಿಯ ಮನೆಗೆ ಬಂದು ಗಲಾಟೆ ನಡೆಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯನ್ನು ಹೇಗಾದರೂ ಮದುವೆಯಾಗಬೇಕೆಂದು ನಿರ್ಧರಿಸಿದ ರಂಗನಾಥ್, ತನ್ನ ಸ್ನೇಹಿತರ ಸಹಕಾರದಿಂದ ಅಪಹರಣ ಸಂಚು ರೂಪಿಸಿದ್ದ. ಅಕ್ಟೋಬರ್ 8ರ ಸಂಜೆ ಯುವತಿ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ತಂಡದೊಂದಿಗೆ ಮನೆಗೆ ನುಗ್ಗಿ ಆಕೆಯನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ ಮದುವೆಯಾಗುವ ಯೋಜನೆ ಮಾಡಿದ್ದ.

ಆದರೆ, ಪೊಲೀಸರು ತಕ್ಷಣದ ಕಾರ್ಯಾಚರಣೆಯಿಂದ ಅಪಹರಣಕಾರರ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು. “ಯುವತಿಯನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 5
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2