ಕೊಡವ ಮಕ್ಕಡ ಕೂಟಕ್ಕೆ 13ನೇ ವಾರ್ಷಿಕೋತ್ಸವದ ಸಂಭ್ರಮ : 124 ಮತ್ತು 125ನೇ ಪುಸ್ತಕ ಬಿಡುಗಡೆ

ಕೊಡವ ಮಕ್ಕಡ ಕೂಟಕ್ಕೆ 13ನೇ ವಾರ್ಷಿಕೋತ್ಸವದ ಸಂಭ್ರಮ : 124 ಮತ್ತು 125ನೇ ಪುಸ್ತಕ ಬಿಡುಗಡೆ

ಮಡಿಕೇರಿ : ಭಾಷೆ ಯಾವುದೇ ಇರಲಿ, ಕೃತಿ ರಚನೆಕಾರರು ತಪ್ಪುಗಳು ನುಸುಳದಂತೆ ಎಚ್ಚರ ವಹಿಸಬೇಕು ಮತ್ತು ಭಾಷಾ ಪರಿಣಿತರಿಂದ ಪುಸ್ತಕದ ಕುರಿತು ಮೊದಲು ಅಭಿಪ್ರಾಯ ಸಂಗ್ರಹಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರು ಕಿವಿಮಾತು ಹೇಳಿದ್ದಾರೆ.

ಕೊಡವ ಮಕ್ಕಡ ಕೂಟದ ೧೩ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ ೧೨೪ ಮತ್ತು ೧೨೫ನೇ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ರಚಿಸಿರುವ ೪ನೇ ಪುಸ್ತಕ ನೆನಪಿನ ಅಲೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬಾಚರಣಿಯಂಡ ಅಪ್ಪಣ್ಣ ಅವರು ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ಹೆಚ್ಚು ತಪ್ಪುಗಳು ನುಸುಳುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು. 

ಬರಹಗಾರರು ತಾವು ಬರೆದ ಪುಸ್ತಕದಲ್ಲಿನ ತಪ್ಪುಗಳನ್ನು ಪರಿಶೀಲಿಸಲು ತಮಗೆ ವಿಶ್ವಾಸ ಇರುವವರಿಗೆ ಮೊದಲು ಓದಲು ನೀಡಬೇಕು. ತಪ್ಪುಗಳನ್ನು ಸರಿಪಡಿಸಿದ ನಂತರವೇ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಓದುಗರಿಗೆ ಅರ್ಪಿಸಬೇಕು. ಓದುಗರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿಗಳು ತಮ್ಮ ಕೃತಿಗಳನ್ನು ಹೊರ ತರಲು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂದೆ ಕೊಡಗಿನಲ್ಲಿ ದಾನಿಗಳ ಕೊರತೆ ಇದ್ದ ಪರಿಣಾಮ ಹೆಚ್ಚಿನ ಬರಹಗಾರರಿಗೆ ತಮ್ಮ ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಗುತ್ತಿರಲಿಲ್ಲ. ಉತ್ಸಾಹಿ ಬರಹಗಾರರಿಗೆ ಪ್ರೋತ್ಸಾಹ ನೀಡಲು ಸಹೃದಯಿ ದಾನಿಗಳು ಮುಂದೆ ಬರಬೇಕು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಸಾಹಿತ್ಯ ಲೋಕದ ನಾವಿಕನಂತೆ ಕಾರ್ಯನಿರ್ವಹಿಸುತ್ತಿದ್ದು, ಬರಹಗಾರರನ್ನು ಬೆಳಕಿಗೆ ತರುತ್ತಿದ್ದಾರೆ. ಕೊಡಗಿನಲ್ಲಿ ಎಲ್ಲಾ ಭಾಷೆಗಳ ಸಾಹಿತ್ಯ ಪ್ರಜ್ವಲಿಸಲಿ, ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲಿ ಎಂದು ಬಾಚರಣಿಯಂಡ ಅಪ್ಪಣ್ಣ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆ ಮತ್ತು ಸಾಮಾಜಿಕ ಕಳಕಳಿಯ ಉದ್ದೇಶದಿಂದ ೨೦೧೩ರಲ್ಲಿ ಕೊಡವ ಮಕ್ಕಡ ಕೂಟವನ್ನು ಸ್ಥಾಪಿಸಲಾಗಿದ್ದು, ಇಂದು ೧೩ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ೨೦೧೬ರಿಂದ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರಲಾಯಿತು. ಸರಕಾರದ ಅನುದಾನವಿಲ್ಲದೆ ಕೇವಲ ೯ ವರ್ಷಗಳಲ್ಲಿ ದಾಖಲೆಯ ೧೨೫ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ ಹೆಗ್ಗಳಿಕೆ ನಮ್ಮದು ಎಂದು ಹರ್ಷ ವ್ಯಕ್ತಪಡಿಸಿದರು.

೨೦೨೪ರಲ್ಲಿ ೨೭ ಪುಸ್ತಕ, ೨೦೨೫ರಲ್ಲಿ ೧೭ ಮತ್ತು ೨೦೨೬ರ ಜನವರಿಯಿಂದ ಇಲ್ಲಿಯವರೆಗೆ ೪ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದೆ. "ಆಟ್‌ಪಾಟ್ ಪಡಿಪು" ನಾಲ್ಕು ಸಾವಿರ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ. ೧೨೩ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ "ಗೌರಮ್ಮ ದತ್ತಿ ನಿಧಿ "ಪ್ರಶಸ್ತಿ ಲಭಿಸಿದೆ. ಐದು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರು ಬರೆದ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಎಂಬ ದಾಖಲೀಕರಣ ಪುಸ್ತಕವನ್ನು ೧೫೦೦ ಪ್ರತಿಗಳನ್ನು ಮುದ್ರಿಸಿ ಕೊಡಗಿನಾದ್ಯಂತ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಿದೆ. ಅಲ್ಲದೆ ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ.ಬೆಳ್ಯಪ್ಪ, ೧೯೬೫ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಕೊಡವ ಕ್ರೀಡಾ ಕಲಿಗಳು, ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. 

ಕೊಡವ ಮಕ್ಕಡ ಕೂಟವು ಪುಸ್ತಕವನ್ನು ಪ್ರಕಟಣೆಗೊಳಿಸುವುದರ ಜೊತೆಯಲ್ಲಿ ಹಲವು ಸಮಾಜಮುಖಿ ಕೆಲಸದಲ್ಲಿ ಸಹ ತೊಡಗಿಸಿಕೊಂಡಿದೆ. ಕೊಡವ ಸಾಂಸ್ಕೃತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಹಾಗೂ ಆಸಕ್ತಿಯನ್ನು ನಿರಂತರವಾಗಿ ಮೂಡಿಸುತ್ತಾ ಬರುತ್ತಿದೆ. ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ "ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ" ಅವರ ವೃತ್ತವನ್ನ ನಿರ್ಮಿಸಿ, ಅದೇ ಜಾಗದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದೊಂದಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಅವರ ನೆನಪನ್ನು ಚಿರಾಯುವಾಗಿಸಿರುವ ಹೆಗ್ಗಳಿಕೆ ಕೊಡವ ಮಕ್ಕಡ ಕೂಟಕ್ಕಿದೆ ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದರು. 

ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರೇ ರಚಿಸಿರುವ ೫ನೇ ಕೃತಿ ಕೊಡಗಿನ ವಿಶೇಷತೆಯ ಸಮಗ್ರ ಸಿರಿ ಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಮಾಜ ಸೇವಕ ಮಂಡೇಪಂಡ ರತನ್ ಕುಟ್ಟಯ್ಯ ಅವರು ಇಂದಿನ ಡಿಜಿಟಲ್ ಯುಗದಲ್ಲಿ ಸಾಹಿತ್ಯದ ಬೆಳವಣಿಗೆ ಕಷ್ಟ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ದಾಖಲೆಯ ೧೨೫ ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡವ ಮಕ್ಕಡ ಕೂಟ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಪ್ರಕಟಗೊಂಡಿರುವ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಡಿಜಿಟಲೀಕರಣಗೊಳಿಸುವಂತೆ ಸಲಹೆ ನೀಡಿದರು.

ನೆನಪಿನ ಅಲೆ ಮತ್ತು ಕೊಡಗಿನ ವಿಶೇಷತೆಯ ಸಮಗ್ರ ಸಿರಿ ಪುಸ್ತಕಗಳ ಲೇಖಕಿ ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ಮಾತನಾಡಿ ಜನ್ಮಭೂಮಿ ಎನ್ನುವುದು ಸ್ವರ್ಗಕ್ಕಿಂತ ಹೆಚ್ಚು, ಕೊಡಗಿನ ಮೂಲನಿವಾಸಿಗಳು ಮೂಲನೆಲೆಯನ್ನು ಮರೆಯಬಾರದು. ಇಲ್ಲಿನ ಪರಿಸರ, ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಹಾಳಾಗಬಾರದು ಎಂದರು.

ಬರಹಗಾರರಿಗೆ ಪುಸ್ತಕ ಬರೆಯುವುದು ಸುಲಭ, ಆದರೆ ಪ್ರಕಟಿಸುವುದು ಕಷ್ಟ. ಕೊಡವ ಮಕ್ಕಡ ಕೂಟ ಸಂಘಟನೆ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳಗಿಸುತ್ತಿದೆ ಎಂದು ಶ್ಲಾಘಿಸಿದರು. 

ಬಾಲ್ಯದಲ್ಲಿ ತಾವು ಓದಿದ ರಾಮಾಯಣ, ಮಹಾಭಾರತ ಮತ್ತು ಪಂಚತಂತ್ರ ಕಥೆಗಳು ನನ್ನ ಬರವಣಿಗೆಗೆ ಸ್ಫೂರ್ತಿಯಾಯಿತು. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು, ಪ್ರತಿಯೊಬ್ಬರು ಕನ್ನಡ ಕಲಿಯಬೇಕು, ಮಾತನಾಡಬೇಕು. ಆ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ನಿಸ್ವಾರ್ಥ ಮನಸ್ಸಿನಿಂದ ಸನ್ಮಾರ್ಗದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಿದರೆ ಯಶಸ್ಸು ಸಾಧ್ಯ ಮತ್ತು ತತ್ವಜ್ಞಾನಿಯಾಗಬಹುದು ಎಂದು ಪುಷ್ಪ ದಮಯಂತಿ ಪೂಣಚ್ಚ ಅಭಿಪ್ರಾಯಪಟ್ಟರು.

ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಮಾತನಾಡಿ ಕೊಡವ ಮಕ್ಕಡ ಕೂಟ ಹಾಗೂ ಲೇಖಕರಿಗೆ ಶುಭ ಹಾರೈಸಿದರು. ಸಮಾಜ ಸೇವಕಿ ಕೊಳುವಂಡ ಅನಿತಾ ಸುಬ್ಬಯ್ಯ, ಕೊಳುವಂಡ ಸುಬ್ಬಯ್ಯ, ಮೂಕೋಂಡ ಪೂಣಚ್ಚ, ಮೂಕೋಂಡ ನಿತಿನ್ ಕುಶಾಲಪ್ಪ, ಲೇಖಕಿ ಐಚಂಡ ರಶ್ಮಿ ಮೇದಪ್ಪ, ಮುಕ್ಕಾಟಿರ ವಿನಯ್, ಕುಲ್ಲೇಟಿರ ಅಜಿತ್ ನಾಣಯ್ಯ ಹಾಗೂ ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಉಪಸ್ಥಿತರಿದ್ದರು.