ಕೂಡಿಗೆ : ಕೊಡಗು ಸೈನಿಕ ಶಾಲೆ ಕೊಡಗಿನಲ್ಲಿ ಕೊಡಗಿಯನ್ ಫುಟ್ಬಾಲ್ ಕ್ರೀಡಾಕೂಟ ಮುಕ್ತಾಯ ; ಕ್ರೀಡಾ ಮನೋಭಾವ,ಪ್ರಾಮಾಣಿಕ ಆಟದಿಂದ ಕ್ರೀಡಾ ಮೌಲ್ಯಗಳನ್ನು ಎತ್ತಿಹಿಡಿಯಬೇಕು : ಕರ್ನಲ್ ಅಮರ್ ಜೀತ್ ಸಿಂಗ್
ಕುಶಾಲನಗರ : ಸಮೀಪದ ಕೂಡಿಗೆಯ ಕೊಡಗು ಸೈನಿಕ ಶಾಲೆಯಲ್ಲಿ ಮೂರು ದಿನಗಳು ಆಯೋಜಿಸಲಾಗಿದ್ದ ಕೊಡಗಿಯನ್ ಫುಟ್ಬಾಲ್ ಟೂರ್ನಮೆಂಟ್ 2026 ಮುಕ್ತಾಯಗೊಂಡಿತು.
ಕೊಡಗು ಸೈನಿಕ ಶಾಲೆಯ ಜೂನಿಯರ್ ಮತ್ತು ಸಬ್-ಜೂನಿಯರ್ ವಿಭಾಗ, ಬೆಂಗಳೂರಿನ ವಾಯುಪಡೆ ಶಾಲೆ ಜಾಲಹಳ್ಳಿ, ವಾಯುಪಡೆ ಶಾಲೆ ಹೆಬ್ಬಾಳ ಮತ್ತು ರಾಷ್ಟ್ರೀಯ ಮಿಲಿಟರಿ ಶಾಲೆ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ,ಕ್ರೀಡಾ ಮನೋಭಾವ ಮತ್ತು ಪ್ರಾಮಾಣಿಕ ಆಟದ ಮೌಲ್ಯಗಳನ್ನು ಎತ್ತಿಹಿಡಿಯಲು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಕ್ರೀಡಾಕೂಟದಲ್ಲಿ ರೋಚಕ ಪಂದ್ಯಗಳ ನಂತರ ಸೈನಿಕ ಶಾಲೆ ಕೊಡಗು ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ವಾಯುಪಡೆ ಶಾಲೆ ಹೆಬ್ಬಾಳ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿತು.
ಸೈನಿಕ ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ವಿಜೇತ ತಂಡಗಳಿಗೆ ಪಾರತೋಷಕ, ಚಿನ್ನದ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು.
ಕ್ರೀಡಾಕೂಟದಲ್ಲಿ ಸೈನಿಕ ಶಾಲೆ ಕೊಡಗಿನ ಕೆಡೆಟ್ ಪ್ರಜ್ವಲ್ ಎಸ್ ಅತ್ಯುತ್ತಮ ಆಟಗಾರನನ್ನಾಗಿ ಹಾಗೂ ಉತ್ತಮ ಗೋಲ್ ಕೀಪರ್ ಆಗಿ ಆರ್ಯ ಚಿರಾಯ್ ಗೌಡರನ್ನು ಗುರುತಿಸಿ ಗೌರವಿಸಲಾಯಿತು. ಈ ಕ್ರೀಡಾಕೂಟಕ್ಕೆ ಕೂಡಿಗೆಯ ಕೆನರಾ ಬ್ಯಾಂಕ್ ಪ್ರಾಯೋಜಕತ್ವ ನೀಡಿ ಸಹಕರಿಸಿತ್ತು.
ಈ ಸಂದರ್ಭದಲ್ಲಿ ಶಾಲೆಯ ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಿಬ್ಬಂದಿಗಳು, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ ಮತ್ತು ಶಿಸ್ತಿನ ಭಾವನೆಯನ್ನು ಮೂಡಿಸುವ ಮೂಲಕ ಯಶಸ್ವಿಯಾಗಿ ತೆರೆಕಂಡಿತು.