ಸಂಭ್ರಮದಿಂದ ಜರುಗಿದ ಕೊಂಡಂಗೇರಿ ಮಖಾಂ ಉರೂಸ್; ಮಾನವೀಯತೆ ಸಾರುವ ಧಾರ್ಮಿಕ ಕಾರ್ಯಕ್ರಮ ಅತ್ಯವಶ್ಯಕ : ಶಾಸಕ ಎ.ಎಸ್ ಪೊನ್ನಣ್ಣ

Apr 15, 2026 - 12:21
 0  133
ಸಂಭ್ರಮದಿಂದ ಜರುಗಿದ ಕೊಂಡಂಗೇರಿ ಮಖಾಂ ಉರೂಸ್; ಮಾನವೀಯತೆ ಸಾರುವ ಧಾರ್ಮಿಕ ಕಾರ್ಯಕ್ರಮ ಅತ್ಯವಶ್ಯಕ : ಶಾಸಕ ಎ.ಎಸ್ ಪೊನ್ನಣ್ಣ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಪ್ರಸ್ತುತ ಕಾಲಘಟ್ಟದಲ್ಲಿ ಮಾನವೀಯತೆಯನ್ನ ಸಾರುವ ಧಾರ್ಮಿಕ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹೇಳಿದರು.

ಇತಿಹಾಸ ಪ್ರಸಿದ್ಧ ಕೊಂಡಂಗೇರಿಯಲ್ಲಿ ಅಂತ್ಯ ವಿಶ್ರಾಂತಿ ಪಡುತ್ತಿರುವ ಔಲಿಯಾಗಳ ವಾರ್ಷಿಕ ಉರೂಸ್ ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕರು ರಾಜ್ಯದಲ್ಲಿ ಮಾನ್ಯಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಿದೆ. ಅದರಲ್ಲು ವಿರಾಜಪೇಟೆ ವಿಧಾನ ಸಭಾ ಕ್ಷೆತ್ರಕ್ಕೆ ವಿಶೇಷವಾಗಿ ಹೆಚ್ಚಿನ ಅಧ್ಯತೆಯನ್ನು ಕೊಟ್ಟು ಅಭಿವೃದ್ಧಿಪಡಿಸಲು ಅವಕಾಶವನ್ನ ಕೊಟ್ಟಿದ್ದಾರೆ.ಇದರಿಂದ ರಸ್ತೆಗಳ ನಿರ್ಮಾಣ,ಕುಡಿಯುವ ನೀರಿನ ಸೌಲಭ್ಯ,ವಿದ್ಯುತ್ ಸಮಸ್ಯೆಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕಳೆದ 3 ವರ್ಷಗಳಲ್ಲಿ ಹಮ್ಮಿಕೊಂಡಿದ್ದೇವೆ.

ಕೊಂಡಂಗೇರಿಯಲ್ಲೂ ಕೂಡ ಹಲವಾರು ರಸ್ತೆ ಕಾಮಗಾರಿಗಳನ್ನು ಪೂರ್ಣ ಗೊಳಿಸಿದ್ದೇವೆ.ಉರೂಸ್ ಕಾರ್ಯಕ್ರಮದಂದು ಕೂಡ 3 ರಸ್ತೆ ಕಾಮಗಾರಿ ಉದ್ಘಾಟನೆಯಾಗಲಿದೆ. ನನಗೆ ದೊರೆತ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾಮಗಾರಿ ನಡೆದಿದೆ ಮುಂದಿನ ದಿನಗಳಲ್ಲಿ ಕೂಡ ಅಭಿವೃದ್ಧಿ ಕಾಮಗಾರಿ ಇದೆ ರೀತಿ ಮುಂದುವರಿಯಲಿದೆ ಎಂದು ನುಡಿದರು.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು. ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಮುಖ್ಯ ಭಾಷಣಗಾರರಾಗಿ ಮಾತನಾಡಿ ಆರ್ಥಿಕ ಹಾಗೂ ಭೌತಿಕವಾಗಿ ಮುಸಲ್ಮಾನರು ಮುಂದುವರೆದಿದ್ದರೂ ಕೂಡ ಶೈಕ್ಷಣಿಕ ವಿಚಾರದಲ್ಲಿ ಇಂದು ಅತ್ಯಂತ ಹಿಂದುಳಿದ ವರ್ಗದವರಾಗಿದ್ದೇವೆ.ದೇಶದಲ್ಲಿ ಶೇ20ರಷ್ಟು ಮುಸಲ್ಮಾನರಿದ್ದು ಹಿಂದುಳಿದ ವರ್ಗಕ್ಕಿಂತ ಹಿಂದುಳಿದಿದ್ದೇವೆ.

ಶೇ 1.17 ಇರುವ ಸಿಖ್ ವಿಭಾಗವು ಶಿಕ್ಷಣ ಪಡೆಯುವುದರ ಮೂಲಕ ಇಂದು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದೆ. ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡದಿರುವುದೇ ಮುಸಲ್ಮಾನರ ಕಡಗಣೆನೆಗೆ ಕಾರಣ, ಮುಸಲ್ಮಾರನ್ನು ಬೀದಿ ಬೀದಿಗಳಲ್ಲಿ ಪ್ರತಿಭಟನೆ,ಭಾಷಣ ಮುಂತಾದವುಗಳಿಗೆ ರಾಜಕಾರಣಿಗಳು ಅವರ ರಾಜಕೀಯ ಬೇಳೆ ಬೇಯಿಸಲು ಬಳಸುತ್ತಾರೆ ಹೊರತು ಉನ್ನತ ಶಿಕ್ಷಣ ನೀಡಿ ಸಂವಿಧಾನದ ಬದ್ದವಾಗಿ ಮುಸಲ್ಮಾನರನ್ನು ಮುಂದಕ್ಕೆ ತರದೇ ಇರುವುದು ದುಃಖಕರ ಎಂದ ಅವರು ಮುಸಲ್ಮಾನರು ವಿದ್ಯಾಭ್ಯಾಸ ಶೈಕ್ಷಣಿಕ ವಿಚಾರದಲ್ಲಿ ಇವತ್ತಿಗೂ ಕೂಡ ಮುಂದುವರಿಯುತ್ತಿಲ್ಲ ಶೈಕ್ಷಣಿಕವಾಗಿ ಮುಂದುವರೆಯಲು ಸಮುದಾಯ ಬಾಂಧವರು ಅದರನ್ನು ಯುವಕ ಯುವತಿಯರು ಹೆಚ್ಚು ಗಮನ ಕೊಡಬೇಕು ಎಂದರು.

 ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಯಾಬುದ್ದೀನ್ ಅಲ್ ಐದರೂಸಿ ತಂಙಳ್ ಕಿಲ್ಲೂರ್ ಉದ್ಘಾಟಿಸಿ ಮಾತನಾಡಿದರು. ಇದೆ ಸಂದರ್ಭ ಶಾಸಕ ಎ.ಎಸ್.ಪೊನ್ನಣ್ಣನವರನ್ನು ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಮಸೀದಿಯ ತಕ್ಕ ಮುಖ್ಯಸ್ಥರಾದ ಕುಂಞಿ ಅಹ್ಮದ್ ಮುಸ್ಲಿಯಾರ್,ಇಕ್ಬಾಲ್ ಹಾಜಿ,ಜಮಾಅತ್ ಉಪಾಧ್ಯಕ್ಷ ಬಶೀರ್,ಕೋಶಾಧಿಕಾರಿ ಕರೀಂ ಹಾಜಿ,ಕಾರ್ಯದರ್ಶಿ ಮುಜೀಬ್,ಕೆ.ಎಚ್.ಅಹ್ಮದ್, ಕೆಎಂಜೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ,ಮರ್ಕಝ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ,ವಖ್ಫ್ ಅಧಿಕಾರಿ ಇರ್ಫಾನ್,ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ವಿರಾಜಪೇಟೆ ತಾಲೂಕು ಅಧ್ಯಕ್ಷ ರಫೀಕ್ ಕೊಳುಮಂಡ, ವಿರಾಜಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮತೀನ್,ಹಮೀದ್ ಕಬಡಕ್ಕೇರಿ,ಎರ್ಮು ಹಾಜಿ,ಹುಸೈನ್ ಹಾಜಿ,ಮಾಜಿ ಗ್ರಾ.ಪಂ.ಸದಸ್ಯ ಅಬ್ದುಲ್ ರಹ್ಮಾನ್ (ಅಂದಾಯಿ),ಹನೀಫ್ ಸಖಾಫಿ,ಎ.ಎಂ. ಅಬ್ದುಲ್ಲ,ಜಮಾಅತ್ ಪದಾಧಿಕಾರಿಗಳು,ಮತ್ತಿತರರು ಉಪಸ್ಥಿತರಿದ್ದರು.

 ಉರೂಸ್ ಸಮಾರಂಭದ ಪ್ರಯುಕ್ತ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಝಿಯಾರತ್ ನಡೆದ ಬಳಿಕ ಸಾವಿರಾರು ಮಂದಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಅಂದು ರಾತ್ರಿ ಡಾ. ಹಫೀಜ್ ಜುನೈದ್ ಜೌಹರಿ ಕೊಲ್ಲಂ ಧಾರ್ಮಿಕ ಮತ ಪ್ರವಚನ ನಡೆಸಿದರು. ಕಾರ್ಯಕ್ರಮದ ಮೊದಲಿಗೆ ಕೊಂಡಂಗೇರಿ ಮುದರ್ರಿಸ್ ಮೊಹ್ಯಿಯದ್ದೀನ್ ಪಾಲಿಲಿ ಅಲ್ ಅಫ್ಲಲಿ ಪ್ರಾರ್ಥಿಸಿ, ಹನೀಫ್ ಸಖಾಫಿ ಸ್ವಾಗತಿಸಿ,ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0