ಕೊಪ್ಪಳ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ತಿರುವು ಸಾಕ್ಷ್ಯ ನಾಶ ಆರೋಪ: ತಾಲೂಕು ವೈದ್ಯಾಧಿಕಾರಿ ವಿರುದ್ಧ ಎಫ್‌ಐಆರ್

Jan 1, 2026 - 17:58
 0  846
ಕೊಪ್ಪಳ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ತಿರುವು ಸಾಕ್ಷ್ಯ ನಾಶ ಆರೋಪ: ತಾಲೂಕು ವೈದ್ಯಾಧಿಕಾರಿ ವಿರುದ್ಧ ಎಫ್‌ಐಆರ್
ಸಾಂದರ್ಭಿಕ ಚಿತ್ರ

ಕೊಪ್ಪಳ, ಜ. 1: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮದ್ಲೂರು ಗ್ರಾಮದಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಇದೀಗ ಹೊಸ ತಿರುವು ಕಂಡುಬಂದಿದೆ. ಆರೋಪಿಗಳನ್ನು ರಕ್ಷಿಸಲು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದಡಿ ಯಲಬುರ್ಗಾ ತಾಲೂಕು ವೈದ್ಯಾಧಿಕಾರಿ ಡಾ. ಶಿವಕುಮಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಗ್ರಹಿಸಿದ್ದ ವೈದ್ಯಕೀಯ ಹಾಗೂ ಭೌತಿಕ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಲಾಗಿದೆ ಎಂಬ ಆರೋಪಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಆರೋಪಿಗಳಿಂದ ಸಂಗ್ರಹಿಸಲಾದ ವಸ್ತುಗಳ ಮೇಲೆ ವೈದ್ಯಾಧಿಕಾರಿಯ ಸೂಚನೆಯಂತೆ ಸಿಬ್ಬಂದಿಯಿಂದ ಸಹಿ ಪಡೆದು, ಡಿಎನ್‌ಎ ಪರೀಕ್ಷೆಗೆ ಅಗತ್ಯವಿದ್ದ ಸಾಕ್ಷ್ಯ ಲಭ್ಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಯಲಬುರ್ಗಾ ಸಿಪಿಐ ಮೌನೇಶ್ವರ್ ಮಾಲಿಪಾಟೀಲ್ ಅವರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 238(ಬಿ) ಅಡಿ ತಾಲೂಕು ವೈದ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ವೈದ್ಯಾಧಿಕಾರಿ ಅಸಹಕಾರ ತೋರಿದ್ದು, ಉದ್ಧಟವಾಗಿ ವರ್ತಿಸಿದ್ದಾರೆ ಎಂಬ ಆರೋಪವನ್ನೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಪ್ರಕರಣದ ಹಿನ್ನೆಲೆ

ನವೆಂಬರ್ 17ರಂದು ಯಲಬುರ್ಗಾ ತಾಲ್ಲೂಕಿನ ಮದ್ಲೂರು ಗ್ರಾಮದ ಬಳಿ 39 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಹೊಸಪೇಟೆಯಿಂದ ಕುಷ್ಟಗಿಗೆ ಹಣ ಪಡೆಯಲು ತೆರಳಿದ್ದ ಮಹಿಳೆಯನ್ನು ಪರಿಚಯಸ್ಥನೊಬ್ಬ ಸೇರಿ ನಾಲ್ವರು ಆರೋಪಿಗಳು ಕರೆದುಕೊಂಡು ಹೋಗಿ, ಪಾನೀಯ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದರು.

ದೂರು ದಾಖಲಾಗಿದ ಬಳಿಕ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂರು ವಿಶೇಷ ತಂಡಗಳನ್ನು ರಚಿಸಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಲಕ್ಷ್ಮಣ, ಬಸವರಾಜ್, ಶಿವಕುಮಾರ್ ಹಾಗೂ ಭೀಮಪ್ಪರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 3
Sad Sad 1
Wow Wow 0