ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ: ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100 ಗಳಿಸಿದ್ದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ ಅಭಿನಂದನೆ, ಸನ್ಮಾನ

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ: ಎಸ್.ಎಸ್.ಎಲ್.ಸಿ  ಫಲಿತಾಂಶ ಶೇ.100   ಗಳಿಸಿದ್ದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ ಅಭಿನಂದನೆ, ಸನ್ಮಾನ

ಕುಶಾಲನಗರ , ಜೂ.21: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ( ಎಸ್.ಡಿ.ಎಂ.ಸಿ.) ಮತ್ತು ಗ್ರಾಮದ ಬಸವೇಶ್ವರ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮಸ್ಥರ ಪರವಾಗಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯ ಪ್ರಾಂಶುಪಾಲರೂ ಆದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ( ಅಭಿವೃದ್ಧಿ) ರಾಮಚಂದ್ರರಾಜೇ ಅರಸ್,

 ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಪ್ರದೇಶದ ಈ ಸರ್ಕಾರಿ ಪ್ರೌಢಶಾಲೆಯು ಶೇ.100 ಫಲಿತಾಂಶ ಗಳಿಸುವ ಮೂಲಕ ಶಿಕ್ಷಣ ಇಲಾಖೆ, ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರಲು ಕಾರಣರಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಕಾರಣವಾಗಿದೆ. ಉತ್ತಮ ಫಲಿತಾಂಶ ತರಲು ಕಾರಣವಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಮಾದರಿಯಾದುದು ಮತ್ತು ಶ್ಲಾಘನೀಯವಾದುದು ಎಂದರು. ಮಕ್ಕಳ ಕಲಿಕೆ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಶಾಲಾ ಶಿಕ್ಷಕರ ವಿಶೇಷ ಕಾಳಜಿ ಮತ್ತು ಮಕ್ಕಳ ಕಠಿಣ ಪರಿಶ್ರಮದಿಂದ ಶೇಕಡಾ 100 ಫಲಿತಾಂಶ ಗಳಿಸಿರುವುದು ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ . ಈ ಶಾಲೆಯ ಪ್ರಾಯೋಗಿಕ ಶೈಕ್ಷಣಿಕ ಚಟುವಟಿಕೆಗಳು ಇಲಾಖೆಗೆ ಮಾದರಿಯಾಗಿವೆ ಎಂದು ಅರಸ್ ಹೇಳಿದರು.

ಗ್ರಾಮಾಂತರ ಪ್ರದೇಶದ ಈ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿ. ಸರ್ಕಾರಿ ಶಾಲೆಗೆ ಗ್ರಾಮಸ್ಥರು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದು ಅರಸ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಎಂ.ಪಿ.ಕೇಶವಕಾಮತ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸಲು ಶ್ರಮಿಸಿದ ಶಿಕ್ಷಕರು,‌ ಉತ್ತಮ ಸಾಧನೆ ಮಾಡಿದ ಶಿಕ್ಷಕರು ಹಾಗೂ ಕಲಿಕೆಗೆ ಸಹಕರಿಸಿದ ಪೋಷಕರ ಕಾಳಜಿಯನ್ನು ಶ್ಲಾಘಿಸಿದರು.

 ಗ್ರಾ.ಪಂ.ಆಡಳಿತಾಧಿಕಾರಿ ಮಿಲನಾ ಭರತ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಬೆಳೆಸಿಕೊಂಡು ಅಭ್ಯಾಸ ಮಾಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

 ಪ್ರಾಸ್ತವಾಕವಾಗಿ ಮಾತನಾಡಿದ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಶಾಲೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಶ್ರಮಿಸಿದ ಶಿಕ್ಷಕರ ಸೇವಾ ಕಾರ್ಯ ಮತ್ತು ಮಕ್ಕಳ ಕಲಿಕಾ ಪರಿಶ್ರಮ ಅನನ್ಯವಾದುದು. ಗ್ರಾಮಸ್ಥರು ಶಾಲೆಯ ಮೇಲಿಟ್ಟಿರುವ ಕಾಳಜಿಗೆ ನಾವುಗಳು ಕೃತಜ್ಞರಾಗಿದ್ದೇವೆ ಎಂದರು.

ಹೆಬ್ಬಾಲೆ ಪ್ರೌಢಶಾಲಾ ವಿದ್ಯಾವರ್ಧಕ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕರ ವಿಶೇಷ ಕಾಳಜಿಯು ಅನನ್ಯವಾದುದು.ಗ್ರಾಮಸ್ಥರು ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಮಾದರಿಯಾದುದು ಎಂದರು.

 ಪ್ರವಾಸೋದ್ಯಮಿ ಕೆ.ಕೆ.ಮಂಜುನಾಥಕುಮಾರ್, ನಮ್ಮೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ ಗ್ರಾಮದ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರ ವತಿಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ.ಮುಂದಿನ ವರ್ಷಗಳಲ್ಲಿ ಕೂಡ ಶಾಲೆಗೆ ಉತ್ತಮ ಫಲಿತಾಂಶ ಲಭಿಸಲಿ ಎಂದರು.

ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ‌ ಪ್ರಾಂಶುಪಾಲ ಎಚ್.ಜೆ.ನಾಗರಾಜ್ ಮಾತನಾಡಿ, ಶಾಲೆಯಲ್ಲಿ ಬೋಧನಾ ಶಿಕ್ಷಕರ ಪರಿಶ್ರಮ ಮತ್ತು ಕಲಿಕಾ ವಾತಾವರಣ ಇರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿರುವುದನ್ನು ಶ್ಲಾಘಿಸಿದರು.

ಗ್ರಾಮ‌ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕೆ.ಎನ್. ಪವನಕುಮಾರ್ ಮಾತನಾಡಿ, ಶಾಲೆಯಲ್ಲಿ ಉತ್ತಮ ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕರ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಬಿ.ದಿಶಾ, ಜೆ.ರಂಜಿತಾ, ಕೆ.ವೈ.ಭೂಮಿಕಾ ಹಾಗೂ ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್ ಡಿ ಎಂ ಸಿ ಸದಸ್ಯೆ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಕೆ.ಭೋಗಪ್ಪ, ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಜಿಲ್ಲಾ ಪಿಯೂ ಕಾಲೇಜಿನ ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗಪ್ಪ ಯಾಲಕ್ಕಿಕಟ್ಟೆ, ಸ್ಕೌಟ್ಸ್ ಮಾಸ್ಟರ್ ಎಂ.ಎಸ್.ಗಣೇಶ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಗೋವಿಂದೇಗೌಡ, ಗ್ರಾಮದ ಹಿರಿಯರಾದ ಕೆ.ಎಸ್.ರಾಜಾಚಾರಿ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಈರಪ್ಪ, ಸದಸ್ಯರಾದ ಚಂದ್ರಶೇಖರ್, ಶ್ರೀನಿವಾಸಚಾರ್, ಜೇಸೀಗಳಾದ ರಜನೀಕಾಂತ್ ತೇಜ ದಿನೇಶ್, ಶ್ರೀನಿವಾಸ್, ವಿವಿಧ ಸಂಘ,- ಸಂಸ್ಥೆಗಳ ಪ್ರಮುಖರಾದ ಟಿ.ಎಸ್.ಶಾಂಭಶಿವಮೂರ್ತಿ, ಎಚ್.ಪಿ.ಉದಯಕುಮಾರ್, ಇತರರು ಇದ್ದರು.

ಹಿರಿಯ ಶಿಕ್ಷಕ ಕೆ.ಗೋಪಾಲಕೃಷ್ಣ ವಂದಿಸಿದರು. ವಿದ್ಯಾರ್ಥಿನಿ ಕೆ.ಪಿ.ಸಾಕ್ಷಿ ನಿರ್ವಹಿಸಿದರು. ಇದೇ ವೇಳೆಯಲ್ಲಿ ಎನ್.ಎನ್.ಎಂ.ಎಸ್.(NMMS: (NMMS) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿನಿ ವರ್ಷ ಳನ್ನು ಸನ್ಮಾನಿಸಿ ಗೌರವಿಸಲಾಯಿತು.