ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಪೈನರಿ ಮಖಾಂ ಉರೂಸ್ ಸೌಹಾರ್ದ ಸಮ್ಮೇಳನ; ಧಾರ್ಮಿಕ ಕೇಂದ್ರಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಲು ಸಾಧ್ಯ; ಶಾಸಕ ಎ.ಎಸ್.ಪೊನ್ನಣ್ಣ

ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಪೈನರಿ ಮಖಾಂ ಉರೂಸ್ ಸೌಹಾರ್ದ  ಸಮ್ಮೇಳನ;   ಧಾರ್ಮಿಕ ಕೇಂದ್ರಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಲು ಸಾಧ್ಯ; ಶಾಸಕ ಎ.ಎಸ್.ಪೊನ್ನಣ್ಣ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಲ್ಪಡುವ ಉರೂಸ್ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಶಾಂತಿ,ಸಾಮರಸ್ಯ ನೆಲೆಸಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ. ಎಸ್. ಪೊನ್ನಣ್ಣ ಹೇಳಿದರು. ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಗ್ರಾಮದ ಪೈನರಿ ದರ್ಗಾದ ವಾರ್ಷಿಕ ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲಾ ಜನಾಂಗದವರು ಪಾಲ್ಗೊಂಡು ನಾಡಿಗೆ ಸುಖ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಉರೂಸ್ ಕಾರ್ಯಕ್ರಮ ಒಳಿತನ್ನು ನೀಡಲಿ. ಸರ್ವಧರ್ಮದ ಸಹಬಾಳ್ವೆ ಎಂಬುದು ನಾಡಿನ ಒಳಿತಿಗೆ ಅತೀ ಮುಖ್ಯವಾಗಿದೆ.ದೇಶದಲ್ಲಿ ಎಲ್ಲರು ಕೂಡ ಅವರವರ ಧರ್ಮ ಪಾಲನೆ ಮತ್ತು ಆಚರಣೆಗಳನ್ನು ಸ್ವತಂತ್ರವಾಗಿ ಆಚರಿಸಲು ಬಿಡಬೇಕು ಎಂಬುದೇ ಈ ದೇಶದ ಸಂವಿಧಾನದ ಮೂಲ ಉದ್ದೇಶ ಎಂದರು.

 ಕಳೆದ ಮೂರು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುದಾನವನ್ನು ಒದಗಿಸಿ ಕೊಟ್ಟಿದೆ. ಅದರಂತೆ ವಿರಾಜಪೇಟೆ ಕ್ಷೆತ್ರದಲ್ಲೂ ಕೂಡ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ.ಮುಂದೆಯೂ ಕ್ಷೇತ್ರದಲ್ಲಿ ಹಂತ ಹಂತವಾಗಿಹಲವು ಕಾರ್ಯಕ್ರಮಗಳು ನಡೆಯಲಿದ್ದು ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕೆಂದರು.

 ಉರೂಸ್ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ನಡೆಸಿದ ಅಂತರಾಷ್ಟ್ರೀಯ ಪ್ರಖ್ಯಾತ ವಾಗ್ಮಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅವರು ಮಾತನಾಡಿ ಕುಂಜಿಲ ಉರೂಸ್ ಸಮಾರಂಭ ಸೌಹಾರ್ದತೆಗೆ ಸಾಕ್ಷಿಯಾಗಿದೆ. ವಿವಿಧ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ.ಇದರಿಂದ ದೇಶಾದ್ಯಂತ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗುತ್ತಿದೆ.ಸಮಾಜದಲ್ಲಿ ನಾವೆಲ್ಲರೂ ಪರಸ್ಪರ ದ್ವೇಷವನ್ನು ದೂರವಿಟ್ಟು ಜೀವಿಸಬೇಕು.ಎಲ್ಲಾ ಜಾತಿ ಧರ್ಮದವರು ಪರಸ್ಪರ ಉಪಕಾರ ಮಾಡಬೇಕೆ ಹೊರತು ಉಪದ್ರವನ್ನು ಮಾಡಬಾರದೆಂದು ನುಡಿದರು.

 ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ. ಸೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪೈನರಿ ಮಸೀದಿಯ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಎ. ಎಸ್.ಪೊನ್ನಣ್ಣ ಹಾಗೂ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅವರನ್ನು ಪೈನರಿ ಸುನ್ನೀ ಮುಸ್ಲಿಂ ಜಮಾ ಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಶತಾಯುಷಿ ಹುಸೈನಾರ್ ಹಾಜಿ, ಕೆಪಿಸಿಸಿ ಸದಸ್ಯ ಯಾಕೂಬ್,ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಎಂ. ಎಚ್. ಅಬ್ದುಲ್ ರಹ್ಮಾನ್,ಕೆಎಂಜೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ,ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಮರ್ಕಝ್ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ,ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್,ಕೋಶಾಧಿಕಾರಿ ಕುಂಡಂಡ ಹಂಝ,ದರ್ಸ್ ಸಮಿತಿಯ ಅಧ್ಯಕ್ಷ ಹಂಝ ತರಮೇಲ್,ಕಡಂಗ ಬದ್ರಿಯಾ ಜಮಾಅತ್ ಅಧ್ಯಕ್ಷ ಉಸ್ಮಾನ್,ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ,ಬೆಳೆಗಾರರಾದ ಉದಿಯಂಡ ಸುಭಾಷ್,ಮೇಚಂಡ ಚೇತನ್, ಬೊಳೆಯಾಡಿರ ಸಂತು ಸುಬ್ರಮಣಿ,ಅಂಜಪರವಂಡ ಅಭಿನ್ ಚಿಟ್ಟಿಯಪ್ಪ, ಪಾಂಡಂಡ ನರೇಶ್,ಗ್ರಾಮ ಪಂಚಾಯಿತಿ ಸದಸ್ಯರಾದ ಕುಂಡಂಡ ರಝಾಕ್,ಬಶೀರ್ ಪೊಯಕ್ಕರೆ, ಅಬ್ದುಲ್ ರಹ್ಮಾನ್ ಹಾಜಿ, ಮೊಹಮ್ಮದ್ ಹಾಜಿ,ಹುಸೈನ್ ಹಾಜಿ,ಅಝಿಝ್ ಮಾಸ್ಟರ್,ಜಮಾಅತ್ ಪದಾಧಿಕಾರಿಗಳು,ದರ್ಸ್ ಸಮಿತಿ ಪದಾಧಿಕಾರಿಗಳು,ರೀಲೀಫ್ ಫಂಡ್ ಪದಾಧಿಕಾರಿಗಳು,ಮತ್ತಿತರರು ಉಪಸ್ಥಿತರಿದ್ದರು.

ಉರೂಸ್ ಸಮಾರಂಭದ ಪ್ರಯುಕ್ತ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆದ ಬಳಿಕ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು. ರಾತ್ರಿ ಕೇರಳದ ವಾಗ್ಮಿ ನವಾಸ್ ಮನ್ನಾನಿ ಪನವೂರ್ ಧಾರ್ಮಿಕ ಮತ ಪ್ರವಚನ ನಡೆಸಿದರು. ಕಾರ್ಯಕ್ರಮದ ಮೊದಲಿಗೆ ಮಸೀದಿಯ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಪ್ರಾರ್ಥಿಸಿ, ಜಮಾಅತ್ ಮಾಜಿ ಕಾರ್ಯದರ್ಶಿ ಅಝಿಝ್ ಮಾಸ್ಟರ್ ಸ್ವಾಗತಿಸಿ,ಜಮಾಅತ್ ಕಾರ್ಯದರ್ಶಿ ಸಹೀದ್ ಪಯ್ಯಡತ್ ಸರ್ವರನ್ನು ವಂದಿಸಿದರು.