ಕರ್ನೂಲ್ ಬಸ್ ದುರಂತದ ತನಿಖೆ: ಬಸ್ ಡಿಕ್ಕಿಗೂ ಮುನ್ನವೇ ಬೈಕ್ ಸವಾರ ಸಾವು | ಬಸ್ ನಲ್ಲಿತ್ತು ₹46 ಲಕ್ಷ ಮೌಲ್ಯದ ಮೊಬೈಲ್ ಫೋನ್ ಗಳು!
ಹೈದರಾಬಾದ್: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಎಸಿ ಸ್ಲೀಪರ್ ಬಸ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 19 ಪ್ರಯಾಣಿಕರು ಸಜೀವ ದಹನವಾದ ಘಟನೆಗೆ ಹೊಸ ತಿರುವು ದೊರೆತಿದೆ. ಈ ದುರಂತಕ್ಕೂ ಮುನ್ನ ಬಸ್ ಡಿಕ್ಕಿ ಹೊಡೆದಿದ್ದ ಬೈಕ್ ನ ಸವಾರ ಶಿವಶಂಕರ್ (22) ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಪೊಲೀಸರ ಪ್ರಕಾರ, ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಬಳಿ ಬೈಕ್ ಸ್ಕಿಡ್ ಆಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಿವಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಯರಿಸ್ವಾಮಿ ಅವರಿಗೆ ಸಣ್ಣ ಗಾಯಗಳಾಗಿದ್ದು, ನಂತರ ಆತಂಕದಿಂದ ತಮ್ಮ ಗ್ರಾಮ ತುಗ್ಗಲಿಗೆ ತೆರಳಿದ್ದರು.
“ಪೆಟ್ರೋಲ್ ಬಂಕ್ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ, ಇಬ್ಬರು ಪಲ್ಸರ್ ಬೈಕ್‌ನಲ್ಲಿ ಪೆಟ್ರೋಲ್ ಪಂಪ್ ಗೆ ತೆರಳಿದ್ದರು. ಅಲ್ಲಿ ಸಿಬ್ಬಂದಿ ಇಲ್ಲದ ಕಾರಣ ಸ್ಟಾಂಡ್ ನಲ್ಲಿಯೇ ಬೈಕ್ ತಿರುಗಿಸಿ, ಅಪಾಯಕಾರಿಯಾಗಿ ಶಿವಶಂಕರ್ ಬೈಕ್ ಚಲಾಯಿಸಿದ್ದ. ಕೆಲವೇ ಕ್ಷಣಗಳಲ್ಲಿ ಅಪಘಾತ ಸಂಭವಿಸಿದೆ. ಯರಿಸ್ವಾಮಿ ಶಿವಶಂಕರ್ ಉಸಿರಾಟ ಪರಿಶೀಲಿಸಿ ಉಸಿರು ನಿಂತಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಬೈಕ್ ಪಕ್ಕಕ್ಕೆ ಎಳೆಯಲು ಯತ್ನಿಸುತ್ತಿದ್ದಾಗ ಬಸ್ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಬಸ್ ಕೆಲ ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಘರ್ಷಣೆಯಿಂದ ಬೆಂಕಿ ಹೊತ್ತಿಕೊಂಡಿದೆ” ಎಂದು ಕರ್ನೂಲ್ ಎಸ್‌ಪಿ ವಿಕ್ರಾಂತ್ ಪಾಟೀಲ್ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಶಿವಶಂಕರ್ ಪೆಟ್ರೋಲ್ ಬಂಕ್‌ನಲ್ಲಿ ಅಸಹಜವಾಗಿ ವರ್ತಿಸುತ್ತಿರುವುದು ಕಾಣಿಸಿಕೊಂಡಿದೆ. ಪೊಲೀಸರು ಅವರು ಮದ್ಯ ಸೇವನೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದು, ಮೃತದೇಹದ ಒಳಾಂಗ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಪಘಾತಕ್ಕೀಡಾದ ‘ಕಾವೇರಿ ಟ್ರಾವೆಲ್ಸ್’ ಕಂಪೆನಿಯ ಬಸ್‌ನಲ್ಲಿ ಅನೇಕ ಸುರಕ್ಷತಾ ನಿಯಮ ಉಲ್ಲಂಘನೆಗಳಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಂಧ್ರ ಪ್ರದೇಶ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ.
“ಬಸ್ ಅನ್ನು ಸ್ಲೀಪರ್ ಕೋಚ್ ಆಗಿ ಪರಿವರ್ತನೆ ಮಾಡಿದ್ದರೂ ಅದಕ್ಕೆ ಅನುಮತಿ ಪಡೆದಿರಲಿಲ್ಲ. ಅಗ್ನಿ ಪತ್ತೆ ಹಾಗೂ ನಿಗ್ರಹ ವ್ಯವಸ್ಥೆ, ತುರ್ತು ನಿರ್ಗಮನ, ಅಗ್ನಿ ನಿರೋಧಕ ಪರದೆಗಳು ಮತ್ತು ಕುಶನ್‌ಗಳು ಬಸ್ನ್ ನಲ್ಲಿ ಇರಲಿಲ್ಲ. ಬಸ್ ನಲ್ಲಿ ಅಗತ್ಯವಿರುವಷ್ಟು ತುರ್ತು ನಿರ್ಗಮನಕ್ಕಾಗಿ ಗಾಜು ಒಡೆಯಲು ಸುತ್ತಿಗೆಗಳೂ ಇರಲಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಆಂಧ್ರ ಪ್ರದೇಶದಲ್ಲಿ ನೋಂದಾಯಿತವಾಗಿರದೆ ದಮನ್ ಮತ್ತು ದಿಯುನಲ್ಲಿ ನೋಂದಾವಣಿಯಾಗಿತ್ತು ಎಂಬುದೂ ಪತ್ತೆಯಾಗಿದೆ. ನ್ಯಾಷನಲ್ ಪರ್ಮಿಟ್ ಆಧಾರದಲ್ಲಿ ಬಸ್ ಸಂಚರಿಸುತ್ತಿತ್ತು. ಪರವಾನಗಿ ಮತ್ತು ವಿಮೆ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಸ್‌ನ ಲಗೇಜ್ ವಿಭಾಗದಲ್ಲಿ ಇದ್ದ 234 ಸ್ಮಾರ್ಟ್‌ಫೋನ್‌ಗಳ ಲಿಥಿಯಂ-ಅಯಾನ್ ಬ್ಯಾಟರಿಗಳು ಸ್ಪೋಟಗೊಂಡು ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಈ ಮೊಬೈಲ್‌ಗಳು ₹46 ಲಕ್ಷ ಮೌಲ್ಯದ ಪಾರ್ಸೆಲ್ ಆಗಿ ಬೆಂಗಳೂರಿನ ಇ-ಕಾಮರ್ಸ್ ಕಂಪೆನಿಗೆ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಬೆಂಕಿ ಹೊತ್ತಿಕೊಂಡಾಗ ಚಾಲಕ ಮಿರಿಯಾಲ ಲಕ್ಷ್ಮಯ್ಯ ಪ್ರಯಾಣಿಕರ ಬಾಗಿಲಿನಿಂದ ಹಾರಿ ಪಾರಾಗಿದ್ದಾನೆ. ಕೂಡಲೇ ಎರಡು ಟೈರ್ ಗಳ ಮಧ್ಯೆ ಲಗೇಜು ಇಡುವ ಸ್ಥಳದಲ್ಲಿ ಮಲಗಿದ್ದ ಇಬ್ಬರು ಹೆಚ್ಚುವರಿ ಚಾಲಕರನ್ನು ಆತ ಎಚ್ಚರಿಸಿದ್ದಾನೆ. ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಶುಕ್ರವಾರ ಅವನನ್ನು ವಶಕ್ಕೆ ಪಡೆದಿದ್ದು, ನಿರ್ಲಕ್ಷ್ಯ ಹಾಗೂ ಅತಿ ವೇಗದ ಚಾಲನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೆಲವು ಪ್ರಯಾಣಿಕರು ಕಿಟಕಿಯ ಗಾಜು ಒಡೆದು ಪಾರಾಗಿದ್ದರು ಎಂದು ಎಸ್‌ಪಿ ವಿಕ್ರಾಂತ್ ಪಾಟೀಲ್ ತಿಳಿಸಿದ್ದಾರೆ.
“ಸುಟ್ಟು ಕರಕಲಾಗಿರುವ 19 ದೇಹಗಳ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಯುತ್ತಿದ್ದು, 27ರಂದು ಫಲಿತಾಂಶಗಳು ಬರುವ ಸಾಧ್ಯತೆ ಇದೆ. ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು", ಎಂದು ಕರ್ನೂಲ್ ಜಿಲ್ಲಾಧಿಕಾರಿ ಎ. ಸಿರಿ ಅವರು ತಿಳಿಸಿದ್ದಾರೆ.
ಈ ದುರಂತದ ನಂತರ ತೆಲಂಗಾಣ ಸಾರಿಗೆ ಇಲಾಖೆ ಖಾಸಗಿ ಬಸ್‌ಗಳ ಮೇಲಿನ ಪರಿಶೀಲನೆ ಕಠಿಣಗೊಳಿಸಿದೆ. ಶನಿವಾರ 54 ಬಸ್‌ಗಳ ತಪಾಸಣೆ ನಡೆಯಿದ್ದು, ನಿಯಮ ಉಲ್ಲಂಘಿಸಿದ ಒಂದು ಬಸ್ ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಎಲ್ಲಾ ಬಸ್ ಮಾಲೀಕರಿಗೆ ಮತ್ತು ಚಾಲಕರಿಗೆ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.