ಕುಶಾಲನಗರ :ಧರ್ಮಸ್ಥಳ ಬಗ್ಗೆ ಅಪಪ್ರಚಾರ ಖಂಡಿಸಿ ಬೃಹತ್ ಪ್ರತಿಭಟನೆ
ಕುಶಾಲನಗರ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಭಕ್ತಾಬಿಮಾನಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಬೈಚನಹಳ್ಳಿ ಮಾರಮ್ಮ ದೇವಸ್ಥಾನ ಬಳಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದ್ದು,ಭಕ್ತ ವೃಂದ ಕೈಯಲ್ಲಿ ಬ್ಯಾನರ್ ,ವಿವಿಧ ನಾಮಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಬೇಕೆ ಬೇಕು ನ್ಯಾಯ ಬೇಕು,ಧರ್ಮ ದೇವರ ರಕ್ಷಣೆ ನಮ್ಮ ಹೊಣೆ,ಪೂಜ್ಯ ಹೆಗ್ಗಡೆ ಅವರ ಜೊತೆ ನಾವಿದ್ದೇವೆ.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಯವಾಗಲಿ.ಸುಳ್ಳು ಆರೋಪ,ಅವಹೇಳನ ನಿಲ್ಲಿಸಿ, ನಕಲಿ ಯೂಟ್ಯೂಬ್ ಬರ್ಸ್ ಗಳನ್ನು ಬಂಧಿಸಿ,ಶಕ್ತಿ ನಂಬಿಕೆ,ಆರಾಧನೆ ಶಕ್ತಿ ಪೀಠ ಧರ್ಮಸ್ಥಳ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು. ಕಿಡಿಗೇಡಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಶನಿವಾರಸಂತೆ ಬಳಿಯ ಮುಳ್ಳೂರು ಮಠದ ಶ್ರೀ ಬಸವಲಿಂಗ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ರಾಜ್ಯದ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ಮಂಜುನಾಥ್ ಸ್ವಾಮಿ ದೇವಾಲಯವು ಒಂದು.ಈ ದೇವಾಲಯಕ್ಕೆ ಸರಿ ಸುಮಾರು 800 ವರ್ಷಗಳ ಇತಿಹಾಸ ಇದೆ.ದಕ್ಷಿಣ ಕಾಶೀ ಎಂದೇ ಕರೆಯುವ ಈ ಪುಣ್ಯಕ್ಷೇತ್ರಕ್ಕೆ ಕರ್ನಾಟಕ, ತಮಿಳುನಾಡು,ಕೇರಳ,ಆಂದ್ರಪ್ರದೇಶ ಹಾಗೂ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ರೀತಿಯ ಧಾರ್ಮಿಕ ನಂಬಿಕೆಯುಳ್ಳ ಪುಣ್ಯಕ್ಷೇತ್ರದ ಮೇಲೆ ಹಾಗೂ ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆಗಳಲ್ಲಿ ವಿಡಿಯೋ ತುಣುಕುಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ಕ್ರಮ ಖಂಡನೀಯ ಎಂದರು. ಅನಾದಿ ಕಾಲದಿಂದಲೂ ಹಿಂದೂ ಧಾರ್ಮಿಕ ಕೇಂದ್ರ, ಮಠಮಾನ್ಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪಿತೂರಿ ನಡೆಯುತ್ತಿದೆ.ಹಿಂದಿನಿಂದಲೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಅಪಪ್ರಚಾರ ಮಾಡಿದ್ರು ಕೂಡ ಭಕ್ತರಿಗೆ ಕ್ಷೇತ್ರದ ಬಗ್ಗೆ ಶ್ರದ್ಧೆ ಕಡಿಮೆಯಾಗುವುದಿಲ್ಲ ಎಂಬುದು ತಿಳಿಯಬೇಕು ಎಂದರು. ಹಿಂದೂ ಧರ್ಮ ಅಳಿಸಲು ಸಾಧ್ಯವಿಲ್ಲ ಎಂದು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬ್ ಬರ್ಸ್ಗಳಿಗೆ ಕ್ಷೇತ್ರದ ಮಂಜುನಾಥ್ ಹಾಗೂ ಅಣ್ಣಪ್ಪಸ್ವಾಮಿ ತಕ್ಕ ಶಿಕ್ಷೆ ನೀಡಿ ಅವರನ್ನು ನಾಶ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು. ಇದು ಹಿಂದಿನಕಾಲ ಅಲ್ಲ.ಈಗ ಮಾಡಿದ ಕರ್ಮ ಈಗಲೇ ಶಿಕ್ಷೆಯನ್ನು ಅನುಭವಿಸಬೇಕು ಖಂಡಿತ ಅಣ್ಣಪ್ಪಸ್ವಾಮಿ ಶಿಕ್ಷೆ ಕೊಡುತ್ತಾನೆ ಎಂಬ ನಂಬಿಕೆ ನಮಗಿದೆ ಎಂದರು.ರಾಜ್ಯದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಿರುವುದು ಧರ್ಮಸ್ಥಳ ಮಾತ್ರ.ಇದರಿಂದ ಸಮಾಜ ಹಾಗೂ ಭಕ್ತರು ಅಭಿವೃದ್ಧಿ ಹೊಂದಿದ್ದಾರೆ. ಸ್ವಾಭಿಮಾನದಿಂದ ಬದುಕಲು ಧರ್ಮಸ್ಥಳ ಕಲಿಸಿದೆ.ಅವರ ಋಣದಲ್ಲಿ ನಾವು ಬದುಕುತ್ತಿದ್ದೇವೆ.ಆದರೆ ಧರ್ಮದ್ರೋಹಿಗಳ ಜೊತೆಗೆ ನಮ್ಮವರು ಸೇರಿಕೊಂಡಿರುವುದು ತುಂಬ ಬೇಸರವಾಗಿದೆ.
ಗ್ರಾಮೀಣ ಜನರ, ಮಹಿಳೆಯರ ಬದುಕು ಹಸನಾಗಬೇಕು ಎಂದು ಧರ್ಮದರ್ಶಿ ಹೆಗ್ಗಡೆ ಅವರು ಕೋಟ್ಯಾಂತರ ಅನುದಾನ ಕೊಟ್ಟಿದ್ದಾರೆ.ನಾವೆಲ್ಲಾ ಅವರ ಬೆಂಬಲವಾಗಿ ಇದ್ದೇವೆ ಎಂದು ಘೋಷಣೆ ಮಾಡಿದರು. ಕೊಡಗು ಜನಜಾಗೃತಿ ವೇದಿಕೆ ಸದಸ್ಯ ನಿಸರ್ಗ ಸ್ವಾಮಿ ಮಾತನಾಡಿ ಶಾಲೆಗಳ, ದೇವಾಲಯಗಳ, ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುತ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೂಲಕ ಕೋಟ್ಯಾಂತರ ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಧರ್ಮದರ್ಶಿ ಹೆಗ್ಗಡೆ ಅವರು ಕಾರಣರಾಗಿದ್ದಾರೆ ಎಂದು ಅಂಕಿಅಂಶಗಳ ಮೂಲಕ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪುಂಡರೀಕಾಕ್ಷ ಮಾತನಾಡಿ,ಧರ್ಮಸ್ಥಳ ಹಾಗೂ ಹೆಗ್ಗಡೆ ಅವರ ಬಗ್ಗೆ ಅನ್ಯಧರ್ಮಿಯ ಕೆಲವು ಪುಂಡರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ಖಂಡಿಸುತ್ತೇವೆ. ಧಾರ್ಮಿಕ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾರ್ಯಪ್ಪ ವೃತ್ತ ದಿಂದ ರಥಬೀದಿ ಮೂಲಕ ಮೆರವಣಿಗೆ ಹೋಗಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ವೇದಿಕೆ ಸದಸ್ಯರಾದ ಎ.ಎಸ್.ಚಂದ್ರಶೇಖರ್ ಆವರ್ತಿ,ಎಚ್.ಎಂ. ಚಂದ್ರು,ಎಸ್.ಕೆ.ಸತೀಶ್,ಕೆ.ಎಸ್.ರಾಜಶೇಖರ್,ಎಂ.ಎನ್ ಚಂದ್ರಮೋಹನ್,ಬೈಲುಕುಪ್ಪೆ ಸ್ವಾಮಿ ವಿವಿಧ ಸಂಘಟನೆಗಳ ಮುಖಂಡರಾದ ಬಿ.ಆರ್.ನಾಗೇಂದ್ರ ಪ್ರಸಾದ್, ಆವೃತ್ತಿ ಮಹಾದೇವಪ್ಪ,ಮನುನಂಜುಂಡ,ಬೋಸ್ ಮೊಣ್ಣಪ್ಪ,ಎಂ.ಎಂ.ಚರಣ್,ಎಚ್.ಎಂ.ಮಧುಸೂದನ್, ಎಂ.ಎಸ್.ಶಿವಾನಂದ,ಅಮೃತ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.