ಕುಶಾಲನಗರ:ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ
ಕುಶಾಲನಗರ:ಗುರುವಾರ ದಿನ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕುಶಾಲನಗರದಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸಮೀಪದ ಚಿಕ್ಕಹೊನ್ನೂರು ಗ್ರಾಮದ ನಿವಾಸಿ ಹರೀಶ (೪೦) ಎಂಬಾತ ಸಾಲದ ಬಾಧೆಯಿಂದ ನೊಂದು ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ದೃಶ್ಯವನ್ನು ಕಂಡ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಸಿಬ್ಬಂದಿ ಸಂಪತ್ ಮತ್ತು ಹೆಚ್. ವಿ. ಧರ್ಮ ಅವರುಗಳು ತಕ್ಷಣ ಧಾವಿಸಿ ನದಿಗೆ ಹಾರುತ್ತಿದ್ದ ಕ್ಷಣದಲ್ಲಿ ಆತನನ್ನು ಸೇತುವೆ ಮೇಲ್ಭಾಗದಿಂದ ಎಳೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.