ಕುಶಾಲನಗರ : ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮ ಅಗ್ನಿಶಾಮಕ ಸೇವೆ ಜನರ ಜೀವ, ಆಸ್ತಿ ರಕ್ಷಣೆಯೊಂದಿಗೆ ಅತ್ಯಾಧುನಿಕ ತುರ್ತು ಸೇವೆಯಾಗಿದೆ : ಲತೀಶ್ ಕುಮಾರ್

ಕುಶಾಲನಗರ : ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮ  ಅಗ್ನಿಶಾಮಕ ಸೇವೆ ಜನರ ಜೀವ, ಆಸ್ತಿ ರಕ್ಷಣೆಯೊಂದಿಗೆ ಅತ್ಯಾಧುನಿಕ ತುರ್ತು ಸೇವೆಯಾಗಿದೆ : ಲತೀಶ್ ಕುಮಾರ್

ಕುಶಾಲನಗರ : ಪ್ರತಿ ವರ್ಷ ಏಪ್ರಿಲ್ 14ರಂದು, ರಾಷ್ಟ್ರೀಯ ಅಗ್ನಿಶಾಮಕ ಸೇವಾ ದಿನವಾಗಿ ಆಚರಿಸಲಾಗುತ್ತಿದ್ದು,1944ರಲ್ಲಿ ಮುಂಬೈ ಬಂದರನ ವಿಕ್ಟೋರಿಯಾ ಡಾಕ್ ನಲ್ಲಿ ನಡೆದ ಸ್ಪೋಟ ದುರಂತದಲ್ಲಿ ಹುತಾತ್ಮರಾದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ಈ ದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿ ಲತೀಶ್ ಕುಮಾರ್ ಹೇಳಿದರು.

 ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಂಸ್ಥೆ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ವಿವೇಕಾನಂದ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ವಿಶೇಷ ಕಾರ್ಯಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಸಂಘಟಿತ ಅಗ್ನಿಶಾಮಕ ಸೇವೆಯ ಆರಂಭ ಬ್ರಿಟಿಷರ ಆಡಳಿತ ಕಾಲದಲ್ಲಿ ನಡೆದಿದೆ. ಆ ಕಾಲದಲ್ಲಿ, ನಗರ ಪ್ರದೇಶಗಳಲ್ಲಿ ವ್ಯಾಪಾರ ಕೇಂದ್ರಗಳು, ಬಂದರುಗಳು ಹಾಗೂ ಕಟ್ಟಡಗಳು ಹೆಚ್ಚಾದಂತೆ ಬೆಂಕಿ ಅನಾಹುತಗಳೂ ಹೆಚ್ಚಾಗುತ್ತಿದ್ದವು. ಇದರಿಂದ ಬೆಂಕಿ ನಂದಿಸಲು ಪ್ರತ್ಯೇಕ ವ್ಯವಸ್ಥೆಯ ಅಗತ್ಯತೆ ಕಂಡುಬಂತು.

ಆರಂಭಿಕ ಹಂತವಾಗಿ 1803ರಲ್ಲಿ ಮುಂಬೈ ಪ್ರದೇಶದಲ್ಲಿ ಸಂಭವಿಸಿದ ದೊಡ್ಡ ಬೆಂಕಿ ದುರಂತದ ನಂತರ ಸಂಘಟಿತ ಅಗ್ನಿಶಾಮಕ ವ್ಯವಸ್ಥೆ ಅಗತ್ಯವೆನಿಸಲಾಯಿತು.ನಂತರ ಕೋಲ್ಕತ್ತಾ, ಮುಂಬೈ, ಮದ್ರಾಸ್ ನಗರಗಳಲ್ಲಿ ಸ್ಥಳೀಯ ಅಗ್ನಿಶಾಮಕ ಘಟಕಗಳು ಸ್ಥಾಪನೆಗೊಂಡವು.ಮೊದಲಿಗೆ ಕೈಚಾಲಿತ ನೀರಿನ ಪಂಪ್‌ಗಳು, ಕುದುರೆಗಾಡಿ ಮೂಲಕ ಉಪಕರಣ ಸಾಗಣೆ, ಸ್ಥಳೀಯ ಸಿಬ್ಬಂದಿಯಿಂದ ಸೇವೆ ನಡೆಯುತ್ತಿತ್ತು.ಸ್ವಾತಂತ್ರ್ಯ ನಂತರ ಎಲ್ಲಾ ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆ ವಿಸ್ತಾರಗೊಂಡಿತು. ನಗರಗಳ ಜೊತೆಗೆ ಪಟ್ಟಣ, ಕೈಗಾರಿಕಾ ಪ್ರದೇಶ, ವಿಮಾನ ನಿಲ್ದಾಣ, ಬಂದರು, ಅರಣ್ಯ ಪ್ರದೇಶಗಳಿಗೂ ಈ ಸೇವೆ ವಿಸ್ತರಿಸಲಾಯಿತು.

 ದೇಶದಲ್ಲಿ 65 ಪ್ರಮುಖ ಇಲಾಖೆಗಳಲ್ಲಿ ಅಗ್ನಿಶಾಮಕ ದಳ ಮೊದಲನೆಯ ಸ್ಥಾನದಲ್ಲಿದೆ.ನಮ್ಮ ದೈನಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ತೀರಾ ಅವಶ್ಯಕವಾಗಿರುವ ಇಲಾಖೆಯಾಗಿ,ಇಂದು ಅಗ್ನಿಶಾಮಕ ದಳವು ಕೇವಲ ಬೆಂಕಿ ನಂದಿಸುವ ಸೇವೆಯಲ್ಲ, ರಸ್ತೆ ಅಪಘಾತ, ಕಟ್ಟಡ ಕುಸಿತ, ಪ್ರವಾಹ, ಭೂಕಂಪ, ರಾಸಾಯನಿಕ ಅನಾಹುತ, ರಕ್ಷಣಾ ಕಾರ್ಯಾಚರಣೆಗಳಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದ್ದು,ಸಣ್ಣ ನಗರ ಸೇವೆಯಾಗಿ ಆರಂಭವಾದ ಅಗ್ನಿಶಾಮಕ ದಳ ಇಂದು ಜನರ ಜೀವ ಮತ್ತು ಆಸ್ತಿ ರಕ್ಷಣೆಯ ಅತ್ಯಾಧುನಿಕ ತುರ್ತು ಸೇವೆಯಾಗಿ ಬೆಳೆದಿದೆ ಎಂದರು.

 ಶಾಲಾ-ಕಾಲೇಜುಗಳಲ್ಲಿ ಅಗ್ನಿ ಸುರಕ್ಷತಾ ತರಬೇತಿ, ಮಾಕ್ ಡ್ರಿಲ್, ತುರ್ತು ನಿರ್ಗಮನ ಮಾರ್ಗಗಳ ಅರಿವು, ಮನೆಯಲ್ಲಿ ವಿದ್ಯುತ್ ಉಪಕರಣಗಳ ಸುರಕ್ಷಿತ ಬಳಕೆ ಬಗ್ಗೆ ತಿಳಿದುಕೊಂಡು ಕುಟುಂಬಕ್ಕೂ ತಿಳಿಸಬಹುದು. ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ, ಮನೆಯಲ್ಲಿ ಒಂದು ಸಿಲೆಂಡರ್ ಇದೆ ಎಂದರೆ ಒಂದು ಬಾಂಬ್ ಇದ್ದ ಹಾಗೆ ಎಂಬಂತಾಗಿದೆ. ಆದರೂ ಬೆಂಕಿ ಕಂಡರೆ ಗಾಬರಿ ಬೇಡ ಜಾಗೃತಿ ಬೇಕು ಎಂದು ಕೆಲವು ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನೆಗಳು, ಅಂಗಡಿಗಳು, ಕಾರ್ಖಾನೆಗಳು, ಅರಣ್ಯ ಪ್ರದೇಶಗಳು ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಂತಹ ಕಾರಣಗಳಿಂದ ಬೆಂಕಿ ಅನಾಹುತಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬೇಸಿಗೆ ಕಾಲದಲ್ಲಿ ಉಷ್ಣತೆ ಹೆಚ್ಚಳ, ನಿರ್ಲಕ್ಷ್ಯ, ಸುರಕ್ಷತಾ ನಿಯಮಗಳ ಪಾಲನೆ ಕೊರತೆ ಹಾಗೂ ಅಜಾಗರೂಕತೆಯಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದರು.

ಈ ಸಂದರ್ಭ ಮಹಾತ್ಮ ಗಾಂಧಿ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ. ಲಿಖಿತ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಅಗ್ನಿಶಾಮಕ ಅಧಿಕಾರಿ ರಂಜಿತ್,ನಿವೃತ್ತ ಪ್ರಾಧ್ಯಾಪಕ ಸಬಲಂ ಭೋಜಣ್ಣ ರೆಡ್ಡಿ ಪಾಲ್ಗೊಂಡಿದ್ದರು.ನಂತರ ಕಾಲೇಜಿನ ಆವರಣದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಪ್ರಾತ್ಯಕ್ಷಿಕೆ ಮತ್ತು ಬೆಂಕಿ ಅನಾಹುತ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ಮಾಹಿತಿ ನೀಡಿದರು.

ಕುಶಾಲನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ವಿಶೇಷ ಕಾರ್ಯಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.