ಕುಶಾಲನಗರ:ಸಂವಿಧಾನವನ್ನು ಗೌರವಿಸುವುದು ಮತ್ತು ಅದರಲ್ಲಿ ಉಲ್ಲೇಖಿಸಿರುವ ಬಹುವಿಧದ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಉಪನ್ಯಾಸಕ ಜಯಕುಮಾರ್

Nov 27, 2025 - 11:15
 0  142
ಕುಶಾಲನಗರ:ಸಂವಿಧಾನವನ್ನು ಗೌರವಿಸುವುದು ಮತ್ತು ಅದರಲ್ಲಿ ಉಲ್ಲೇಖಿಸಿರುವ ಬಹುವಿಧದ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ:  ಉಪನ್ಯಾಸಕ ಜಯಕುಮಾರ್

ಕುಶಾಲನಗರ; ಸಂವಿಧಾನವನ್ನು ಗೌರವಿಸುವುದು ಮತ್ತು ಅದರಲ್ಲಿ ಉಲ್ಲೇಖಿಸಿರುವ ಬಹುವಿಧದ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶನಿವಾರಸಂತೆ ವಿಘ್ನೇಶ್ವರ ವಿದ್ಯಾ ಸಂಸ್ಥೆಯ ಉಪನ್ಯಾಸಕ ಜಯಕುಮಾರ್ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ, ಸಮಾಜಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಟ್ಟಣದ ಕಾರು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು ಇಂದು ಭಾರತೀಯರೆಲ್ಲರೂ ಸಾಮರಸ್ಯದ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಭಾರತೀಯ ಸಂವಿಧಾನ. ಸಂವಿಧಾನ ರಚನೆಯ ಹಿನ್ನೆಲೆ, ಅದಕ್ಕಾಗಿ ಅಂಬೇಡ್ಕ‌ರ್ ಅವರು ಪಟ್ಟ ಶ್ರಮವನ್ನು ಅರ್ಥೈಸಿಕೊಂಡಾಗ ಮಾತ್ರ ಸಂವಿಧಾನದ ಮಹತ್ವತೆ ತಿಳಿಯುತ್ತದೆ ಎಂದ ಅವರು ಭಾರತೀಯತೆಕ್ಕಿಂತ ಮಿಗಿಲಾದ ಧರ್ಮ, ಸಂವಿಧಾನಕ್ಕಿಂತ ಶ್ರೇಷ್ಠ ಗ್ರಂಥ ಬೇರೊಂದಿಲ್ಲ.ದೇಶದ ಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಯೂ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ ಎಂದರು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶಿಲ್ದಾರ್ ಕಿರಣ್ ಜಿ ಗೌರಯ್ಯ, ಮಾತನಾಡಿ, ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನ ಪಡೆದಿದ್ದು, ಹಲವು ದಾಖಲೆಗಳಿಗೆ ಪಾತ್ರವಾಗಿದೆ.

ಭಾರತದಂತಹ ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯವಾದ ಸಂಸ್ಕೃತಿ, ಆಚರಣೆಗಳಿಂದ ಕೂಡಿರುವ ದೇಶಕ್ಕೆ ಸಂವಿಧಾನವನ್ನು ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ, ಅದಕ್ಕೆ ಕಾರಣ, ನಮ್ಮ ಸಶಕ್ತವಾದ ಸಂವಿಧಾನ ಎಂದರು.

ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಪುರಸಭೆ ಮಾಜಿ ಅಧ್ಯಕ್ಷ ಜಯವರ್ಧನ್,ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ನಾಗೇಶ್, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಧಾಮೋದರ್, ಅಂಬೇಡ್ಕರ್ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಜಯಪ್ರಕಾಶ್, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಕೃಷ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ, ಶ್ರೀನಿವಾಸ್, ಪುರಸಭೆ ಮಾಜಿ ಸದಸ್ಯೆ ಜಯಲಕ್ಷಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಶಾಲೆಯ ವಿಧ್ಯಾರ್ಥಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0