ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ‌ ಪ್ರಶಸ್ತಿ ಪ್ರಕಟ: ಏಳು‌ ಮಂದಿಗೆ ಪ್ರಶಸ್ತಿ

ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ‌ ಪ್ರಶಸ್ತಿ ಪ್ರಕಟ: ಏಳು‌ ಮಂದಿಗೆ ಪ್ರಶಸ್ತಿ

ಕುಶಾಲನಗರ: ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025 ನೇ ಸಾಲಿನ ವಾರ್ಷಿಕ ದತ್ತಿನಿಧಿ ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದ್ದು, ಕುಶಾಲನಗರದ ಏಳು ಪತ್ರಕರ್ತರು ಪ್ರಶಸ್ತಿ ಪಡೆದುಕೊಂಡಿದ್ದಾರೆ. 

ಪತ್ರಕರ್ತ ಟಿ‌.ಆರ್. ಪ್ರಭುದೇವ್ ಅವರ ತಂದೆ ಎನ್. ರಾಮಕೃಷ್ಣ ಮತ್ತು ತಾಯಿ ಕೆ.ಎಂ. ಸರಸಮ್ಮ ಅವರ ಸ್ಮರಣಾರ್ಥ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ "ಕಟ್ಟಡ ತೆರವಿನಿಂದ ಬೀದಿಗೆ ಬಿದ್ದ ಪ್ರಕಾಶಣ್ಣ" ಎಂಬ ವರದಿಗೆ ಕೆ.ಬಿ.ಶಂಶುದ್ದೀನ್ ಪಡೆದುಕೊಂಡಿದ್ದಾರೆ.

 ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಳಲಗದ್ದೆ ನಳಂದ ಆಯುರ್ವೇದ ನ್ಯಾಸದ ಖ್ಯಾತ ಪಾರಂಪರಿಕ ವೈದ್ಯೆ ಸುಮನ ಮಳಲಗದ್ದೆ ಅವರು ಸ್ಥಾಪಿಸಿದ ಅತ್ಯುತ್ತಮ ಪಾರಂಪರಿಕ ವೈದ್ಯ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಆರೋಗ್ಯವಂತ ಜೀವನಕ್ಕೆ ಪಾರಂಪರಿಕ ಮದ್ದು" ಎಂಬ ವರದಿಗೆ ವನಿತಾ ಚಂದ್ರಮೋಹನ್ ಪಡೆದುಕೊಂಡಿದ್ದಾರೆ.

ಪತ್ರಕರ್ತ ಕೆ‌.ಬಿ. ಶಂಶುದ್ದೀನ್ ಅವರು ತಮ್ಮ ತಾಯಿ ಕೆ.ಕೆ. ಖತೀಜ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟವಾದ "ಕ್ರೀಡಾಂಗಣಕ್ಕಾಗಿ ಹೋರಾಟಕ್ಕಿಳಿದ ಯುವಪಡೆ" ಎಂಬ ವರದಿಗೆ ಟಿ.ಆರ್. ಪ್ರಭುದೇವ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರ ತಾಯಿ ಅಯಿನಮಂಡ ಲೀಲಾವತಿ ಗಣಪತಿ ತಮ್ಮ ಪತಿ ಅಯಿನಮಂಡ ಗಣಪತಿ ಸ್ಮರಣಾರ್ಥ ಅತ್ತುತ್ತಮ ಅರಣ್ಯ ಮತ್ತು ಪರಿಸರ ವರದಿಗೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಅವ್ಯವಸ್ಥೆ ಆಗರವಾದ ಸುಂಟಿಕೊಪ್ಪ ಸಂತೆ" ಎಂಬ ವರದಿಗೆ ಬಿ.ಕೆ.ಶಶಿಕುಮಾರ್ ರೈ ಅವರು ಪಡೆದುಕೊಂಡಿದ್ದಾರೆ.

 ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ತಾಯಿ ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ದಂಪತಿಗಳ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ " ಪ್ರಮುಖ ಜಿಲ್ಲೆಗಳಲ್ಲಿನ ಹೆಚ್ಚಿನ ಮಳೆಮಾಪಕಗಳು ಕಾರ್ಯ ನಿರ್ವಹಣೆಯಲಿಲ್ಲ" ಎಂಬ ವರದಿಗೆ ಪಿ.ವಿ. ಅಕ್ಷಯ್ ರವರು ಪಡೆದುಕೊಂಡಿದ್ದಾರೆ

ಕುಶಾಲನಗರದ ಶಾರದ ಪತ್ತಿನ ಸಹಕಾರ ಸಂಘದ ಸ್ಮರಣಾರ್ಥ ಅತ್ಯುತ್ತಮ ಸಹಕಾರ ಸಂಘದ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಕುಶಾಲನಗರ ಮಹಿಳಾ ಸಂಘದಲ್ಲಿ ಅವ್ಯವಹಾರದ ತನಿಖೆ" ಎಂಬ ವರದಿಗೆ ಎಂ.ಎನ್. ಚಂದ್ರಮೋಹನ್ ಪಡೆದುಕೊಂಡಿದ್ದಾರೆ.

 ಪತ್ರಕರ್ತ ಕುಡೆಕಲ್ ಗಣೇಶ್ ಅವರ ತಂದೆ ಕುಡೆಕಲ್ ಕೃಷ್ಣಪ್ಪ ಹಾಗೂ ಅವರ ತಾಯಿ ಯಶೋದ ಸ್ಮರಣಾರ್ಥ ಅತ್ಯುತ್ತಮ ದೃಶ್ಯ ವಾಹಿನಿಯ ಸಾಮಾಜಿಕ ಕಳಕಳಿಯ ವರದಿಗೆ ಚಿತ್ತಾರ ವಾಹಿನಿಯಲ್ಲಿ ಪ್ರಕಟವಾದ "ಅನಾದರಕ್ಕೆ ತುತ್ತಾದ ಐತಿಹಾಸಿಕ ತಾವರೆಕೆರೆ" ಎಂಬ ವರದಿಗೆ ಕೆ.ಜೆ.ಶಿವರಾಜ್ ಪಡೆದುಕೊಂಡಿದ್ದಾರೆ.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಈ ಎಲ್ಲಾ ಪ್ರಶಸ್ತಿಗಳನ್ನು ಜೂನ್ 10 ರಂದು ನಡೆಯುವ ಸಂಘದ ವಾರ್ಷಿಕ ಮಹಾಸಭೆ ಹಾಗೂ ದತ್ತಿನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಂದು ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪಡೆದ ಎಲ್ಲರಿಗೂ ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸುತ್ತದೆ. ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಶಿವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.