National News

ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲಕಿಯ ಹತ್ಯೆ! : ಮೃತದೇಹ ತುಂಡು ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿಟ್ಟಿದ್ದ ದಂಪತಿ ಬಂಧನ

admincoorgdaily

Photo credit: TV09

ಲಖನೌ: ಬಾಕಿ ಉಳಿದ ಮನೆ ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲಕಿಯನ್ನೇ ಹತ್ಯೆಗೈದು, ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್‌ ನಲ್ಲಿ ತುಂಬಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದಿದೆ. ಈ ಸಂಬಂಧ ಬಾಡಿಗೆದಾರ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ರಾಜಿನಗರ ಎಕ್ಸ್‌ಟೆನ್ಶನ್ ಪ್ರದೇಶದ ಔರಾ ಚಿಮೆರಾ ಸೊಸೈಟಿಯ ನಿವಾಸಿ ದೀಪಿಕಾ ಶರ್ಮಾ ಅವರು ಬುಧವಾರ ರಾತ್ರಿ ಬಾಡಿಗೆ ವಸೂಲಿಗಾಗಿ ಬಾಡಿಗೆದಾರರ ಮನೆಗೆ ತೆರಳಿದ್ದರು. ಈ ವೇಳೆ ಬಾಡಿಗೆದಾರರಾದ ಅಜಯ್ ಗುಪ್ತಾ ಹಾಗೂ ಅವರ ಪತ್ನಿ ಅಕೃತಿ ಗುಪ್ತಾ, ಬಾಕಿ ಉಳಿದಿದ್ದ ಸುಮಾರು ₹90 ಸಾವಿರ ಬಾಡಿಗೆ ವಿಚಾರವಾಗಿ ನಡೆದ ಜಗಳದ ವೇಳೆ ದೀಪಿಕಾ ಶರ್ಮಾ ಅವರ ತಲೆಗೆ ಪ್ರೆಷರ್ ಕುಕ್ಕರ್‌ ನಿಂದ ಹೊಡೆದು ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ಬಳಿಕ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿ, ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಲು ದಂಪತಿ ಯತ್ನಿಸಿದ್ದಾಗಿ ತಿಳಿದುಬಂದಿದೆ.

ಈ ನಡುವೆ ದೀಪಿಕಾ ಶರ್ಮಾ ಅವರ ಮನೆಕೆಲಸದಾಕೆ ಫ್ಲ್ಯಾಟ್‌ಗೆ ಬಂದು ಮಾಲಕಿಯ ಬಗ್ಗೆ ವಿಚಾರಿಸಿದಾಗ ಆರೋಪಿಗಳ ವರ್ತನೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದೆ. ಏನೋ ಅಕ್ರಮ ನಡೆದಿದೆ ಎಂಬ ಶಂಕೆಯಿಂದ ಮನೆಕೆಲಸದಾಕೆ ಹೊರಗಿನಿಂದ ಬಾಗಿಲು ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮಂಚದಡಿಯಲ್ಲಿ ಇಡಲಾಗಿದ್ದ ಸೂಟ್‌ ಕೇಸ್ ಪತ್ತೆಯಾಗಿದ್ದು, ಅದರೊಳಗೆ ಮೃತದೇಹದ ತುಂಡುಗಳು ಪತ್ತೆಯಾದವು. ಬಳಿಕ ಆರೋಪಿಗಳನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ. 

ಈ ಕೃತ್ಯ ಪೂರ್ವಯೋಜಿತವಾಗಿದ್ದು, ಬಾಡಿಗೆ ವಸೂಲಿಗಾಗಿ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಮೃತ ದೀಪಿಕಾ ಶರ್ಮಾ ಅವರ ತಾಯಿ ಆರೋಪಿಸಿದ್ದಾರೆ. ಈ ಹಿಂದೆಯೂ ಬಾಡಿಗೆ ವಿಚಾರವಾಗಿ ಆರೋಪಿಗಳೊಂದಿಗೆ ಜಗಳ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.