ಸೊಸೆಗೆ ಉದ್ಯೋಗ ನೀಡದ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದ ಜಾಗದ ಮಾಲೀಕ

Jan 8, 2026 - 23:44
 0  987
ಸೊಸೆಗೆ ಉದ್ಯೋಗ ನೀಡದ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದ ಜಾಗದ ಮಾಲೀಕ
ಸಾಂದರ್ಭಿಕ ಚಿತ್ರ(ಅಂಗನವಾಡಿ)

ಬೆಳಗಾವಿ, ಜ. 8:ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಲಾಗಿಲ್ಲ ಎಂಬ ಅಸಮಾಧಾನದಿಂದ ಜಾಗದ ಮಾಲೀಕರೊಬ್ಬರು ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಬೀಗ ಜಡಿದ ಘಟನೆ ರಾಯಭಾಗ ತಾಲ್ಲೂಕಿನ ನಂದಿಕುರಳಿ ಗ್ರಾಮದ ವಂಜೇರಿ ತೋಟದಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಅಂಗನವಾಡಿ ಕೇಂದ್ರ ಮುಚ್ಚಿರುವುದರಿಂದ, ಮಕ್ಕಳು ಕಟ್ಟಡದ ಹೊರ ಆವರಣದಲ್ಲಿಯೇ ಕಾಲ ಕಳೆಯುವಂತಾಗಿದೆ.

ಅಂಗನವಾಡಿ ಕೇಂದ್ರಕ್ಕೆ ಜಾಗ ಒದಗಿಸಿದ್ದ ಬಾಬುರಾವ್ ವಂಜೇರಿ ಅವರು, 2000ರಲ್ಲಿ ತಮ್ಮ ಜಾಗವನ್ನು ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ನೀಡಿದ್ದಾಗಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಕುಟುಂಬದವರಿಗೆ ಇಲ್ಲಿ ಉದ್ಯೋಗ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು ಎಂದು ಅವರು ಹೇಳಿದರು. ಆದರೆ ವರ್ಷಗಳಾದರೂ ಉದ್ಯೋಗ ದೊರಕಿಲ್ಲ. ತಮ್ಮ ಬದಲು ಇತರರಿಗೆ ಕೆಲಸ ನೀಡಲಾಗಿದೆ ಎಂಬುದು ಅವರ ಆರೋಪ.

ಸಹಾಯಕ ಹುದ್ದೆಗಾಗಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ವಂಜೇರಿ ಹೇಳಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರೂ, ಸಿಡಿಪಿಒ ಅವರು ಭೇಟಿ ನೀಡುವುದಾಗಿ ಹೇಳಿ ಬಂದಿಲ್ಲ. “ನಮ್ಮ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿದರೆ ಮಾತ್ರ ಕೇಂದ್ರದ ಬಾಗಿಲು ತೆರೆಯುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಘಟನೆಯಿಂದ ಅಂಗನವಾಡಿ ಸೇವೆಗಳು ಸ್ಥಗಿತಗೊಂಡಿದ್ದು, ಮಕ್ಕಳ ಕಲ್ಯಾಣ ಮತ್ತು ಪೌಷ್ಟಿಕ ಆಹಾರ ವಿತರಣೆಗೆ ಅಡಚಣೆ ಉಂಟಾಗಿದೆ. ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಪೋಷಕರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

What's Your Reaction?

Like Like 3
Dislike Dislike 1
Love Love 0
Funny Funny 0
Angry Angry 1
Sad Sad 1
Wow Wow 0