ಶಾಲೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಉರುಳಿದ ಲಾರಿ : ಐದನೇ ತರಗತಿ ವಿದ್ಯಾರ್ಥಿ ಮೃತ್ಯು:ಇಬ್ಬರು ಪವಾಡ ಸದೃಷ ಪಾರು

Dec 31, 2025 - 01:17
Dec 31, 2025 - 01:18
 0  1.5k
ಶಾಲೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಉರುಳಿದ ಲಾರಿ : ಐದನೇ ತರಗತಿ ವಿದ್ಯಾರ್ಥಿ ಮೃತ್ಯು:ಇಬ್ಬರು ಪವಾಡ ಸದೃಷ ಪಾರು

ಚಿಕ್ಕೋಡಿ (ಬೆಳಗಾವಿ): ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳ ಮೇಲೆ ಸಿಮೆಂಟ್ ತುಂಬಿಕೊಂಡಿದ್ದ ಲಾರಿ ಉರುಳಿಬಿದ್ದ ಪರಿಣಾಮ ಐದನೇ ತರಗತಿ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಬಾಗ ತಾಲ್ಲೂಕಿನ ಹಾಲಶಿರಗೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಅಮೀತ್ ಕಾಂಬಳೆ (11) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಹತ್ತನೇ ತರಗತಿ ವಿದ್ಯಾರ್ಥಿನಿ ಅಂಜಲಿ ಕಾಂಬಳೆ ಹಾಗೂ ಒಂಬತ್ತನೇ ತರಗತಿ ವಿದ್ಯಾರ್ಥಿ ಅವಿನಾಶ್ ಕಾಂಬಳೆ ಅವರನ್ನು ಸಮೀಪದ ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಡಚಿ–ಜಮಖಂಡಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕುಡಚಿಯಿಂದ ಹಾರೂಗೇರಿ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಬೃಹತ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ. ಈ ವೇಳೆ ಬಿಬಿ ಬಾವಿ ಸರ್ಕಾರಿ ಪ್ರೌಢಶಾಲೆಯ ಹಾಲಶಿರಗೂರ ಘಟಕಕ್ಕೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಮಕ್ಕಳ ಮೇಲೆ ಲಾರಿ ಬಿದ್ದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಕುಡಚಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಹಕಾರದಿಂದ ಲಾರಿಯನ್ನು ಮೇಲಕ್ಕೆತ್ತಿ ಅದರಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಯಿತು. ಅಪಘಾತದ ನಂತರ ಸುಮಾರು ಒಂದೂವರೆ ಗಂಟೆ ಕಾಲ ಲಾರಿ ಕೆಳಗೆ ಸಿಲುಕಿದ್ದರೂ ಮಕ್ಕಳು ಜೀವಂತವಾಗಿ ಪಾರಾಗಿರುವುದು ಪವಾಡದಂತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 6
Wow Wow 0