ಗೋಲಿಕಟ್ಟೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ

ಗೋಲಿಕಟ್ಟೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ

ಮಡಿಕೇರಿ; ಮದೆನಾಡು ಬಳಿಯ ಗೋಳಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರಾದರು.    

ಶಾಲೆಯಲ್ಲಿರುವ 6 ಮತ್ತು 7 ನೇ ತರಗತಿಯ ಮೂರು ವಿದ್ಯಾರ್ಥಿಗಳು ಓದುತ್ತಿದ್ದ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ತಿರುವು ಹಾಕಿದ ಶಾಸಕರು, ಭೂಸುಧಾರಣಾ ಕಾಯ್ದೆ ಜಾರಿಗೊಳ್ಳಲು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾರಣಕರ್ತರು ಯಾರೂ ಎಂದು ಪ್ರಶ್ನಿಸಿದರು. 

ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಸರ್ಕಾರ ಕಡಿಮೆ ಮಕ್ಕಳಿದ್ದರೂ ಸಹ ಶಾಲೆಯನ್ನು ಮುಚ್ಚದೆ ಮಧ್ಯಾಹ್ನ ಬಿಸಿಯೂಟ ಜೊತೆಗೆ ಸಮವಸ್ತ್ರ ಮತ್ತಿತರ ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಬಳಸಿಕೊಂಡು ಓದಬೇಕು ಎಂದು ಸಲಹೆ ಮಾಡಿದರು. 

ಅಲ್ಲಿದ್ದ ವಿದ್ಯಾರ್ಥಿಗಳ ಜೊತೆ ಬೆರೆತು ಸಂವಿಧಾನದ ಮಹತ್ವ ಮತ್ತು ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಪಾಠ ಮಾಡಿದರು. ವಿದ್ಯಾರ್ಥಿಗಳಾದ ಯಶಸ್ವಿ ಅವರು ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮೆಚ್ಚುಗೆ ಪಡೆದರು. ಆದಿತ್ಯ, ಕಾವ್ಯ ಸಹ ಶಾಸಕರ ಪ್ರಶ್ನೆಗೆ ಉತ್ತರಿಸಿದರು. 

ಬಳಿಕ 1, 2, 4 ನೇ ತರಗತಿಯ ಸುಮಾರು 6 ವಿದ್ಯಾರ್ಥಿಗಳಿಗೆ ಕಾಗುಣಿತ, ಒತ್ತಕ್ಷರಗಳು, ವ್ಯಂಜನಗಳು, ಸ್ವರಗಳು, ಅಲ್ಪಪ್ರಾಣ, ಮಹಾಪ್ರಾಣ ಬಗ್ಗೆ ವಿವರಿಸಿ ಗಮನ ಸೆಳೆದರು.  

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಗೋಳಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ ಬೀಳುವ ಹಂತದಲ್ಲಿದ್ದು, ಇದನ್ನು ನೆಲಸಮ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಶಾಲಾ ಮೈದಾನ ಬಳಕೆಗೆ ಸಹಕಾರಿಯಾಗಲಿದೆ ಎಂದರು.  

ಸುಮಾರು 70 ರ ದಶಕದಲ್ಲಿ ಸುಮಾರು 400 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿರುವ ಬಗ್ಗೆ ಮಾಹಿತಿ ಇದೆ. ಸರ್ಕಾರ 1 ನೇ ತರಗತಿಯಿಂದಲೂ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಕೆಗೆ ಮುಂದಾಗಿದೆ. ಸರ್ಕಾರಿ ಶಾಲೆಗಳು ಉಳಿಯಬೇಕು. ಆಧುನಿಕತೆಗೆ ತಕ್ಕಂತೆ ಆಲೋಚನೆಗಳು ಸಹ ಬದಲಾಗಿದ್ದು, ಅದರಂತೆ ಸರ್ಕಾರಿ ಶಾಲೆಯನ್ನು ಬದಲಿಸಿಕೊಂಡು ಯಾರೂ ಸಹ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಶಾಲೆಯನ್ನು ಮುಚ್ಚದೆ, ಮಕ್ಕಳಿಗೆ ಶಿಕ್ಷಣ ಕಲಿಸಲು ಪ್ರಯತ್ನಿಸಿದೆ ಎಂದು ಶಾಸಕರು ನುಡಿದರು. 

ಈ ಸಂದರ್ಭದಲ್ಲಿ ಸ್ಥಳೀಯರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ನನ್ನ ತಂದೆಯವರು ಸಹ ಇದೇ ಶಾಲೆಯಲ್ಲಿ ಓದಿದ್ದರು. ಆ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ ಎಂದರು.  

ಶಾಲೆಯ ಶಿಕ್ಷಕಿ ಕೋಮಲ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು. ಕೋವಿಡ್ ನಂತರ ಸಂತ್ರಸ್ತ ಕುಟುಂಬದ ಮಕ್ಕಳು ಹಾಗೂ ಸುತ್ತಮುತ್ತಲಿನ ಕುಟುಂಬಗಳ ಮಕ್ಕಳು ಅಧ್ಯಯನಕ್ಕೆ ಶಾಲೆಯನ್ನು ಪುನರ್ ಆರಂಭಿಸಲಾಗಿದೆ. ಕಳೆದ ವರ್ಷ 12 ಮಕ್ಕಳಿದ್ದರು. ಈ ಬಾರಿ 6 ಕ್ಕಿಂತ ಹೆಚ್ಚು ಮಕ್ಕಳು ಓದುತ್ತಿದ್ದು, ಶಾಲೆಗೆ ಸುತ್ತುಗೋಡೆ ಆಗುವಂತಾಗಬೇಕು ಎಂದು ಕೋರಿದರು. 

ಶಿಕ್ಷಕರಾದ ಬಾಲಕೃಷ್ಣ ಅವರು ಮಾತನಾಡಿ ಇಲ್ಲಿನ ವಿದ್ಯಾರ್ಥಿಗಳು ಭಾಗಮಂಡಲ ಮೊರಾರ್ಜಿ ವಸತಿ ಶಾಲೆ ಹಾಗೂ ಹತ್ತಿರದ ಶಾಲೆಗೆ ವಿದ್ಯಾರ್ಜನೆಗೆ ಹೋಗುತ್ತಿದ್ದಾರೆ. ಹಾಗಾಗಿ ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದಾರೆ ಎಂದರು. 

ಬಳಿಕ ಮದೆನಾಡಿನ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ, ಮಾತನಾಡಿದರು.