ಬೆಂಗಳೂರಿನಲ್ಲಿ ಸುಬ್ರಮಣಿ ರಾಜ ಅವರ ಆರೋಗ್ಯ ವಿಚಾರಿಸಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ; ತಾಲೂಕು, ಕೋಳತೋಡು-ಬೈಗೋಡು ಗ್ರಾಮದ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ಪುಲಿಯಂಡ ರೋಶನ್ ರವರ ಹಿರಿಯ ಸಹೋದರ ಪುಲಿಯಂಡ ಸುಬ್ರಮಣಿ ರಾಜ ರವರು, ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಪ್ರತಿಷ್ಠಿತ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದೊಡನೆ ಬೆಂಗಳೂರಿನಲ್ಲೇ ಇದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಆಸ್ಪತ್ರೆಗೆ ತೆರಳಿ ಸುಬ್ರಮಣಿ ರಾಜ ರವರ ಆರೋಗ್ಯ ವಿಚಾರಿಸಿ ಧೈರ್ಯ ನೀಡಿದರು.
ಇವರ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು, ಕುಟುಂಬದ ಆರ್ಥಿಕ ಸ್ಥಿತಿಯನ್ನು ಮನಗಂಡ ಶಾಸಕರು, ಇವರ ಚಿಕಿತ್ಸೆ ವೆಚ್ಚವನ್ನು ಸರಕಾರದಿಂದ ಭರಿಸಲು ಪ್ರಯತ್ನಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಗಿರೀಶ್, ಚಂಗಪ್ಪ, ಜೋಯ್ ನಂಜಪ್ಪ ಉಪಸ್ಥಿತರಿದ್ದರು.