ಮಾದಕ ವ್ಯಸನಗಳಿಗೆ ತುತ್ತಾಗದಿರಲು ಯುವಕರಿಗೆ ಶಾಸಕ ಡಾ.ಮಂತರ್ ಗೌಡ ಕರೆ

Jan 3, 2026 - 10:20
 0  201
ಮಾದಕ ವ್ಯಸನಗಳಿಗೆ ತುತ್ತಾಗದಿರಲು ಯುವಕರಿಗೆ ಶಾಸಕ ಡಾ.ಮಂತರ್ ಗೌಡ ಕರೆ

ಕಣಿವೆ : ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣದ ಆಸುಪಾಸಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದು ತಮ್ಮ ಅಮೂಲ್ಯವಾದ ಆರೋಗ್ಯ ಹಾಗೂ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನರರೋಗ ತಜ್ಞರೂ ಆದ ಮಡಿಕೇರಿ ಶಾಸಕ ಡಾ.ಮಂತರಗೌಡ ಆತಂಕ ವ್ಯಕ್ತಪಡಿಸಿದರು.

ಕುಶಾಲನಗರದ ಆರ್ಯವೈಶ್ಯ ಸಮಾಜದ ವತಿಯಿಂದ ಕುಲದೇವತೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಳಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿಯ ಕಾಲ್ನಡಿಗೆ ಹಾಗೂ ಸೈಕ್ಲಿಂಗ್ ಗೆ ಚಾಲನೆ ನೀಡಿ ಮಾತನಾಡಿದ ಅವರು, 

ಬದಲಾಗುತ್ತಿರುವ ಪ್ರಾಕೃತಿಕ ಸನ್ನಿವೇಶಗಳಲ್ಲಿ ಅತಿ ಮುಖ್ಯವಾದ ಮನುಷ್ಯನ ಆರೋಗ್ಯ ಅಮುಲ್ಯವಾದುದು.ಮನುಷ್ಯನಿಗೆ ಒಳ್ಳೆಯ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರಾವುದು ಇಲ್ಲ.ಇದರ ಬಗ್ಗೆ ಯುವ ಜನಾಂಗ ಹಾಗೂ ವಿದ್ಯಾರ್ಥಿಗಳು ಮೊದಲು ತಾವು ಅರಿಯಬೇಕಿದೆ.ಆ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಿದೆ.ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸಕ್ಕೆ ಏಕಾಗ್ರತೆ ರೂಢಿಸಿಕೊಳ್ಳಬೇಕಿದೆ.

ಮಾದಕ ವ್ಯಸನಗಳು ವ್ಯಕ್ತಿಯೊಬ್ಬನಿಗೆ ಮಾತ್ರ ಮಾರಕವಲ್ಲ. ಅದು ಇಡೀ ಕುಟುಂಬಕ್ಕೆ ಆಪತ್ತು.ಹಿರಿಯರು ರೂಢಿಸಿಕೊಂಡು ಬಂದ ಪರಂಪರಾಗತ ಉತ್ತಮ ಹವ್ಯಾಸಗಳೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವ ಶಕ್ತಿ ಮುಂದಾಗಬೇಕು ಎಂದು ಡಾ.ಮಂತರ್ ಕರೆ ಕೊಟ್ಟರು.

ಕುಶಾಲನಗರದ ಸಾಮಾಜಿಕ ಚಿಂತಕ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರದ ಅಭಿವೃದ್ದಿಗೆ ಆರ್ಯವೈಶ್ಯ ಸಮಾಜದ ಕೊಡುಗೆ ಅಪಾರವಾದುದು.

ನಗರದ ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳ ಜಾಗ ಆರ್ಯವೈಶ್ಯ ಸಮಾಜದ ಹಿರಿಯರು ಅಂದು ನೀಡಿದ ಬಳುವಳಿ. ಹಾಗಾಗಿ ಜಾತಿಯೊಂದಕ್ಕೆ ಸೀಮಿತವಾಗದ ಸಮಾಜ ಸಮಾಜದ ಸರ್ವ ಜನರ ಹಾಗೂ ಒಳಿತಿಗಾಗಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ರೂಪಿಸಿರುವುದು ಹೆಮ್ಮೆಯ ಸಂಗತಿ. ಮಾದಕ ವ್ಯಸನ ಎಂಬುದು ಸಾಮಾಜಿಕ ಪಿಡುಗು ಆಗಿದ್ದು ಇದರ ವಿರುದ್ದ ಜನಜಾಗೃತಿ ಅಗತ್ಯ ಎಂದು ಶಶಿಧರ್ ಹೇಳಿದರು.

" ಶಕ್ತಿ " ಪತ್ರಿಕೆಯ ಸಲಹಾ ಮಂಡಳಿ ಸಂಪಾದಕ ಅನಂತಶಯನ ಈ ಸಂದರ್ಭ ಮಾತನಾಡಿ, ಭವಿಷ್ಯದ ಭಾರತವನ್ನು ಬಲಿಷ್ಠವಾಗಿ ಕಟ್ಟ ಬೇಕಾದ ಯುವ ಶಕ್ತಿ ಇಂದು ವ್ಯನಗಳಿಗೆ ತುತ್ತಾಗುತ್ತಿರುವುದು ದೇಶದ ಅಭಿವೃದ್ದಿಗೆ ಕಳಂಕವಾಗುತ್ತದೆ.

ಇಂದಿನಿಂದಲೇ ಇಂತಹ ವ್ಯಸನಗಳ ವಿರುದ್ಧ ಶಾಲಾ ಕಾಲೇಜು ಹಂತದಿಂದಲೇ ಮಕ್ಕಳಲ್ಲಿ ಅರಿವು ಮೂಡಿಸುತ್ತಿರುವ ಆರ್ಯವೈಶ್ಯ ಸಮಾಜದ ಸಾಮಾಜಿಕ ಸೇವೆ ಶ್ಲಾಘನೀಯ. ಇಂತಹ ಕಾರ್ಯ ಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸಂಘಟನೆಗಳು ಮುಂದೆ ಬಂದು ಜನರಲ್ಲಿ ಅರಿವು ಮೂಡಿಸಬೇಕೆಂದು ಕರೆ ಕೊಟ್ಟರು.

ಕರ್ನಾಟಕ ಕಾರ್ಯನಿರತ  ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.ಪುರಸಭೆ ಮಾಜಿ ಸದಸ್ಯ ಬಿ.ಅಮೃತರಾಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಕರೆ ಕೊಟ್ಟು ಪ್ರತಿಜ್ಞಾ ವಿಧಿ ಬೋಧಿಸಿದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹೆಚ್.ಟಿ. ಅನಿಲ್, ಮಡಿಕೇರಿಯ ಅಂಬೇಕಲ್ ನವೀನ್, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್,ವಾಕಥಾನ್ ಹಾಗೂ ಸೈಕ್ಲಿಂಗ್ ಕಾರ್ಯಕ್ರಮದ ಸಂಚಾಲಕ ಎ.ಎಸ್.ಕುಮಾರ್,

ಕುಶಾಲನಗರ ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ಯುವತಿ ಮಂಡಳಿ ಅಧ್ಯಕ್ಷೆ ಅನುಷಾ ಅರ್ಜುನ್, ಯುವಕ ಮಂಡಳಿ ಅಧ್ಯಕ್ಷ ಕೆ.ಪ್ರವೀಣ್, ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಅಧ್ಯಕ್ಷ ಡಾ.ಪ್ರವೀಣ್ ದೇವರಕೊಂಡ, 

ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ಕೆ.ಸತೀಶ್, ಚೇಂಬರ್ ಆಫ್ ಕಾರ್ಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿ ಚಿತ್ರಾ ರಮೇಶ್, ಲಯನ್ಸ್ ಅಧ್ಯಕ್ಷ ನಾರಾಯಣ್, ಇನ್ನರ್ ವ್ಹೀಲ್ ಅಧ್ಯಕ್ಷೆ ರೇಶ್ಮಾನವೀನ್,

ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್.ಚಂದ್ರಮೋಹನ್, ಕೊಡಗು ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳಾದ ಪ್ರಸನ್ನ ಭಟ್, ದಾವುದ್ ಮೊದಲಾದವರಿದ್ದರು.

ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ಹೊರಟ ಕಾಲ್ನಡಿಗೆ ಹಾಗೂ ಸೈಕ್ಲಿಂಗ್ ನಲ್ಲಿ ನೂರಾರು ಮಂದಿ ಭಾಗಿಯಾದರು.

ಕುಶಾಲನಗರದ ಆರ್ಯವೈಶ್ಯ ಮಂಡಳಿಯ ವಿವಿಧ ಘಟಕಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ನಡಿಗೆಯಲ್ಲಿ ಪಟ್ಟಣದ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೋಲೀಸ್ ಸಿಬ್ಬಂದಿಗಳು, ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಎನ್ ಸಿ ಸಿ ವಿದ್ಯಾರ್ಥಿ ಗಳು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.

ಪಾಲಿಟೆಕ್ನಿಕ್ ಕಾಲೇಜಿನಿಂದ ಆಗಮಿಸಿದ ಮಾದಕ ದ್ರವ್ಯಗಳ ವಿರುದ್ಧದ ಜನಜಾಗೃತಿ ಕಾಲ್ನಡಿಗೆ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಘೋಷಣೆ ಮೊಳಗಿಸಿತು.

ಗಮನ ಸೆಳೆದ ಸೈಕ್ಲಿಂಗ್

ಮಾದಕ ವ್ಯಸನಗಳ ವಿರುದ್ದದ ಸೈಕ್ಲಿಂಗ್ ಜಾಥಾ ದಲ್ಲಿ ಹತ್ತಾರು ಮಂದಿ ಪಾಲ್ಗೊಂಡು ಗಮನ ಸೆಳೆದರು.ಈ ಪೈಕಿ ಹಿರಿಯ ವಯಸ್ಸಿನ ಕುಶಾಲನಗರದ ಎಸ್.ಕೆ.ಸತೀಶ್, ಕಿರಿಯ ಪ್ರಾಯದ ಮೂರನೇ ತರಗತಿ ವಿದ್ಯಾರ್ಥಿ ಹಿಭಾ, ನಾಲ್ಕನೇ ತರಗತಿಯ ಹಿಭಾ, ಫಾತಿಮಾ, ಹಾಗೆಯೇ ಇರಾನ್ ಮೂಲದ ನಾದಿರ್ ಖಾನ್, ಶಕ್ತಿ ಸಂಪಾದಕ ಅನಂತಶಯನ, ಕ್ಲೀನ್ ಕೂರ್ಗ್ ಸಂಘಟನೆಯ ಅರುಣ್ ಅಪ್ಪಚ್ಚು, ಅನುಜ್ ದೇವಯ್ಯ, ಸುಬ್ಬಯ್ಯ ಪ್ರಮುಖರು.

ವರದಿ : ಕೆ.ಎಸ್.ಮೂರ್ತಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0