ನಿವೇಶನ ರಹಿತರ ಹೋರಾಟಕ್ಕೆ ಶಾಸಕ ಡಾ.ಮಂತರ್ ಗೌಡ ಸ್ಪಂದನೆ: ನಿವೇಶನ ಮಂಜೂರಾತಿಗೆ ಕ್ರಮ ವಹಿಸುವ ಭರವಸೆ

ನಿವೇಶನ ರಹಿತರ ಹೋರಾಟಕ್ಕೆ ಶಾಸಕ ಡಾ.ಮಂತರ್ ಗೌಡ ಸ್ಪಂದನೆ: ನಿವೇಶನ ಮಂಜೂರಾತಿಗೆ ಕ್ರಮ ವಹಿಸುವ ಭರವಸೆ

ಸೋಮವಾರಪೇಟೆ: ತಾಲ್ಲೂಕಿನ ಕುಂಬೂರು ಗ್ರಾಮದಲ್ಲಿ ನಿವೇಶನ ರಹಿತರ ಹೋರಾಟಕ್ಕೆ ಶಾಸಕ ಡಾ: ಮಂತರ್ ಗೌಡ ಅವರು ಪೂರಕವಾಗಿ ಸ್ಪಂದಿಸಿದ್ದು, ನಿವೇಶನ ರಹಿತರ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಧರಣಿ ನಡೆಯುತ್ತಿರುವ ಜಾಗಕ್ಕೆ ನೆನ್ನೆ ಸಂಜೆ ಭೇಟಿ ನೀಡಿದ ಶಾಸಕರು, ಪ್ರತಿಭಟನೆ ನಿರತರ ಅಹವಾಲು ಆಲಿಸಿ ಈ ಭರವಸೆ ನೀಡಿದ್ದಾರೆ.

ಅಖಿಲ ಭಾರತ ಬಹು ಜನ ಸಮಾಜ ಪಾರ್ಟಿಯ ನೇತೃತ್ವದಲ್ಲಿ ಕುಂಬೂರು ಗ್ರಾಮದಲ್ಲಿ ನಿವೇಶನಕ್ಕಾಗಿ ಬಹುದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಸರಕಾರದಿಂದ ಪೂರಕ ಸ್ಪಂದನೆ ದೊರೆಯದಿದ್ದರಿಂದ ಆಕ್ರೋಶಿತರಾಗಿದ್ದ ಪ್ರತಿಭಟನಾಕಾರರು, ಸೋಮವಾರಪೇಟೆಯಲ್ಲಿರುವ ಶಾಸಕರ ಮನೆ ಮುಂದೆ ತಾ. 26 ರಂದು ಉಪವಾಸ ಸತ್ಯಾಗ್ರಹ ಹೂಡುವ ಮುನ್ಸೂಚನೆಯಿತ್ತಿದ್ದರು.

 ಈ ಹಿನ್ನೆಲೆ ಶಾಸಕ ಡಾ: ಮಂತರ್ ಗೌಡ ಅವರು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯವರೊಂದಿಗೆ ಭೇಟಿ ನೀಡಿದ ಸಂದರ್ಭ, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಕೆ. ಮೊಣ್ಣಪ್ಪರವರು ಕುಂಬೂರು ಗ್ರಾಮದ ಸರ್ವೆ ನಂ. 125/1, ಗರಗಂದೂರು ಗ್ರಾಮದ ಸರ್ವೆ ನಂ. 22/1-2 ಹಾಗೂ 40/1 ರಲ್ಲಿ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡರು. ಕ್ಯೂಟ್ ಕೂರ್ಗ್ ನ್ಯೂಸ್. ಆದರೆ ಧರಣಿ ನಡೆಸುತ್ತಿರುವ ಜಾಗ ಖಾಸಗಿ ಜಾಗವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದರಿಂದ ಪ್ರತಿಭಟನಾಕಾರರು ಆಕ್ರೋಶಕ್ಕೊಳಗಾದರು.

ಸರ್ವೆ ನಂ. 125/1 ರಲ್ಲಿರುವ 31.20 ಏಕ್ರೆ ಊರುಡುವೆ ಪೈಸಾರಿ ಜಾಗದ ಪೈಕಿ ನವಗ್ರಾಮಕ್ಕೆ 2 ಏಕ್ರೆ ಜಾಗವನ್ನು ಮೀಸಲಿಡಲಾಗಿದೆ. ಈ ಕುರಿತು 2011ರಲ್ಲಿ ಆದೇಶವನ್ನು ಕೂಡ ಹೊರಡಿಸಲಾಗಿದೆ. ಆದರೆ ನವಗ್ರಾಮಕ್ಕೆ ಮೀಸಲಿಟ್ಟ ಜಾಗವೂ ಸೇರಿದಂತೆ ಉಳಿದ 29.10 ಏಕ್ರೆ ಜಾಗ ಕೂಡ ಒತ್ತುವರಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. ಗರಗಂದೂರಿನ ಸರ್ವೆ ನಂ. 22/1-2 ರಲ್ಲಿರುವ 12 ಏಕರೆ ಊರುಡುವೆ ಪೈಸಾರಿ ಜಾಗದ ಪೈಕಿ 2 ಏಕರೆ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರಿಗೆ ಮಂಜೂರು ಮಾಡಲಾಗಿದ್ದರೆ, ಉಳಿದ 10 ಏಕ್ರೆ ಜಾಗ ಕೂಡ ಒತ್ತುವರಿ ಆಗಿದೆ. ಅಲ್ಲದೇ ಸರ್ವೆ ನಂ. 40/1 ರಲ್ಲಿರುವ 100 ಏಕ್ರೆ ಜಾಗ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಈ ಒತ್ತುವರಿಯನ್ನು ತೆರವುಗೊಳಿಸಿ ನಮಗೆ ನಿವೇಶನ ಒದಗಿಸಬೇಕೆಂದು ಆಗ್ರಹಿಸಿದರು.

 ಈ ಸಂದರ್ಭ ಮಾತನಾಡಿದ ಶಾಸಕ ಡಾ: ಮಂತರ್ ಗೌಡರವರು, ಮೂರು ಸರ್ವೆ ನಂಬರ್ ಗಳಲ್ಲಿರುವ ಜಾಗವನ್ನು ಸಂಪೂರ್ಣವಾಗಿ ಸರ್ವೆ ಮಾಡಿ ತಾರೀಖು 27ರ ಒಳಗೆ ವರದಿ ನೀಡುವಂತೆ ತಹಶೀಲ್ದಾರ್ ಕೃಷ್ಣಮೂರ್ತಿರವರಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನೇ ಇಲ್ಲಿಗೆ ಕಳುಹಿಸಿ ಯಾವ ಯಾವ ಗ್ರಾಮ ಪಂಚಾಯಿತಿಯಿಂದ ಜನ ಬಂದಿದ್ದಾರೆ ಎಂದು ಮಾಹಿತಿ ಪಡೆದುಕೊಳ್ಳಿ ಅರ್ಹ ಫಲಾನುಭವಿಗಳನ್ನು ಗುರುತಿಸಿ. ಗ್ರಾಮ ಪಂಚಾಯಿತಿಯಲ್ಲಿರುವ ನಿವೇಶನ ರಹಿತರ ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಹೆಸರು ಬಿಟ್ಟುಹೋಗಿದ್ದಲ್ಲಿ ನಿವೇಶನ ರಹಿತರ ಪಟ್ಟಿಗೆ ಸೇರಿಸಿ ಎಂದು ಧರಣಿ ನಿರತರು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಡಾ: ಮಂತರ್ ಗೌಡರವರು, ತಾರೀಖು 30 ರೊಳಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ ಪ್ರತಿಭಟನಾಕಾರರು ತಿಳಿಸಿದ ಜಾಗವನ್ನು ತಕ್ಷಣ ಸರ್ವೆ ಮಾಡಿಸಲಾಗುವುದು. ಜಾಗದ ಲಭ್ಯತೆಯನ್ನು ಪರಿಗಣಿಸಿ ನಿವೇಶನ ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ, ನಿವೇಶನ ದೊರೆಯುವವರೆಗೂ ಧರಣಿಯನ್ನು ಮುಂದುವರೆಸುವುದಾಗಿ ಪ್ರತಿಭಟನಾಕಾರರು ಪಟ್ಟುಹಿಡಿದರು. ಈ ಸಂದರ್ಭ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಶಿವಪ್ಪ, ಹೋಬಳಿ ಅಧ್ಯಕ್ಷ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಸುದೀಪ್ ಹಾಗೂ ಇತರರು ಹಾಜರಿದ್ದರು.