ಮಡಿಕೇರಿ:ನ.29 ರಂದು ಸಮಸ್ತ ಶತಮಾನೋತ್ಸವ ಪ್ರಚಾರ ಮಹಾ ಸಮ್ಮೇಳನ

ಮಡಿಕೇರಿ:ನ.29 ರಂದು ಸಮಸ್ತ ಶತಮಾನೋತ್ಸವ ಪ್ರಚಾರ ಮಹಾ ಸಮ್ಮೇಳನ

ಮಡಿಕೇರಿ: ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಒಕ್ಕೂಟದಿಂದ ನ.೨೯ ರಂದು ಸಮಸ್ತ ಶತಮಾನೋತ್ಸವ ಪ್ರಚಾರ ಮಹಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮಸ್ತ ಉಲಮಾ ಒಕ್ಕೂಟದ ಜಂಟಿ ಕಾರ್ಯದರ್ಶಿ ಎಂ.ವೈ.ಅಶ್ರಫ್ ಫೈಝಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಮಸ್ತ ಉಲಮಾ ಸಂಘಟನೆಗೆ ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.೪ ರಿಂದ ೮ರವರೆಗೆ ಆದರ್ಶ ಪರಿಶುದ್ಧತೆ ಶತಮಾನಗಳಿಂದ ಎಂಬ ಘೋಷಣೆಯೊಂದಿಗೆ ಕೇರಳದ ಕಾಸರಗೋಡುವಿನ ಕುಣಿಯಲ್ಲಿ ೧೦೦ನೇ ಅಂತರರಾಷ್ಟ್ರೀಯ ಮಹಾ ಸಮ್ಮೇಳನ ನಡೆಯಲಿದೆ.

ಇದರ ಪ್ರಚಾರಕ್ಕಾಗಿ ನಗರದ ಗಾಂಧಿ ಮೈದಾನದಲ್ಲಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಕಲ್ಲುಬಾಣೆ ಅವರ ನೇತೃತ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ೧೦ ಗಂಟೆಗೆ ಸಮ್ಮೇಳನದ ಅಧ್ಯಯನ ಶಿಬಿರ ನಡೆಯಲಿದೆ.

 ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮೊದಲನೇ ಹಂತದ ಅಧ್ಯಯನ ಶಿಬಿರದಲ್ಲಿ ಆಧ್ಯಾತ್ಮಿಕತೆಯ ಅನಿವಾರ್ಯತೆ ಎಂಬ ವಿಷಯವನ್ನಾಧರಿಸಿ ಸಯ್ಯಿದ್ ಝನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ವಿಷಯ ಮಂಡಿಸಲಿದ್ದಾರೆ. ಎರಡನೇ ಹಂತದ ಶಿಬಿರದಲ್ಲಿ ಸಂಘಟನೆಯ ಪ್ರಾಮುಖ್ಯತೆ ಎಂಬ ವಿಷಯವನ್ನಾಧರಿಸಿ ಇಬ್ರಾಹಿಂ ಪೈಝಿ ಪೇರಾಲ್ ಮಾತನಾಡಲಿದ್ದಾರೆ.

ಸಂಜೆ ೪ ಗಂಟೆಗೆ ಕೊಡಗು ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಎಂ.ಎಂ.ಅಬ್ದುಲ್ಲಾ ಫೈಝಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತ ಕೇಂದ್ರೀಯ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರೂ ಹಾಗೂ ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನೇತಾರರಾದ ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಲಾಂ ದಾರಿಮಿ ಆಲಂಬಾಡಿ, ಉಸ್ಮಾನುಲ್ ಫೈಝಿ ತೋಡಾರು ಅನುಗ್ರಹ ಭಾಷಣ ಮಾಡಲಿದ್ದಾರೆ. ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಸತ್ತಾರ್ ಪಂದಲ್ಲೂರು, ಹೈದರ್ ದಾರಿಮಿ ಕರಾಯ, ಮುಖ್ಯ ಭಾಷಣ ಮಾಡಲಿದ್ದಾರೆ.

ಅಂದು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಎಂ.ಎಂ.ಅಬ್ದುಲ್ಲಾ ಫೈಝಿ, ಸಮಸ್ತ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಸಿ.ಉಸ್ಮಾನ್ ಫೈಝಿ, ಸಂಘಟನಾ ಕಾರ್ಯದರ್ಶಿ ವೈ.ಎಂ.ಉಮರ್ ಫೈಝಿ, ಜಂಟಿ ಕಾರ್ಯದರ್ಶಿ ಝೈನುದ್ದೀನ್ ಫೈಝಿ, ಸದಸ್ಯ ಪಿ.ಎಂ.ಆರಿಫ್ ಫೈಝಿ ಉಪಸ್ಥಿತರಿದ್ದರು.