ಮಡಿಕೇರಿ: ಹನಿಟ್ರ್ಯಾಪ್ ಪ್ರಕರಣದಲ್ಲಿ ಶಾಮೀಲಾಗಿರುವ ವ್ಯಕ್ತಿಯ ಹೆಸರು ಬಹಿರಂಗಗೊಳಿಸಲು ಒತ್ತಾಯ

ಮಡಿಕೇರಿ: ಹನಿಟ್ರ್ಯಾಪ್ ಪ್ರಕರಣದಲ್ಲಿ ಶಾಮೀಲಾಗಿರುವ ವ್ಯಕ್ತಿಯ ಹೆಸರು ಬಹಿರಂಗಗೊಳಿಸಲು ಒತ್ತಾಯ

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಮಡಿಕೇರಿಯಲ್ಲಿ ಹನಿಟ್ರ್ಯಾಪ್ ಪ್ರಕರಣ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಗುತ್ತಿಗೆದಾರರು, ಸಮುದಾಯ, ಸಮಾಜಗಳ ಅಧ್ಯಕ್ಷರುಗಳ ತೇಜೋವಧೆಯಾಗುತ್ತಿರುವ ಹಿನ್ನೆಲೆ ಪ್ರಕರಣದಲ್ಲಿ ಶಾಮೀಲಾಗಿರುವ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿ ತನಿಖೆ ಕೈಗೊಳ್ಳಬೇಕೆಂದು ಮಡಿಕೇರಿ ತಾಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಪಿ.ರಾಜೀವ್ ಲೋಚನ ಒತ್ತಾಯಿಸಿದರು.

ಇತ್ತೀಚೆಗೆ ಮಡಿಕೇರಿ ನಗರದ ಓರ್ವ ಮಹಿಳೆ ಹಾಗೂ ಆಕೆಯ ಸಹಚರರ ಚಾಲಕ್ಕೆ ಮಂಡ್ಯ ಮೂಲದ ವ್ಯಕ್ತಿಯೊಬ್ಬರು ಸಿಲುಕಿ ಮಾರಣಾಂತಿಕ ಹಲ್ಲೆಗೆ ಒಳಪಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಹನಿಟ್ರಾಪ್ ನಡೆಸಿದ ತಂಡ ಬಂಧನ ಆಗಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಗ್ರೂಪ್‌ಗಳಲ್ಲಿ ಮಡಿಕೇರಿಯಲ್ಲಿ ಹಲವಷ್ಟು ಸಮುದಾಯಗಳ, ಸಮಾಜಗಳ ಅಧ್ಯಕ್ಷರು ಹಾಗೂ ಗುತ್ತಿಗೆದಾರರಿದ್ದಾರೆ ಎಂದು ಹರಿದಾಡುತ್ತಿರುತ್ತದೆ. ಪ್ರತಿಯೊಬ್ಬ ಗೌರವಾನ್ವಿತ ವ್ಯಕ್ತಿಯನ್ನೂ ಕೂಡಾ ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿರುತ್ತದೆ. ಇದರಿಂದ ಎಲ್ಲಾ ಗುತ್ತಿಗೆದಾರರ ಹಾಗೂ ಸಮುದಾಯ, ಸಮಾಜಗಳ ಅಧ್ಯಕ್ಷರುಗಳ ತೇಜೋವಧೆಯಾಗುತ್ತಿದೆ. ಇದರಿಂದ ಪ್ರಕರಣದಲ್ಲಿ ಶಾಮೀಲಾಗಿರುವ ವ್ಯಕ್ತಿಯ ಹೆಸರನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಅವರು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಆರ್.ಸದಾಶಿವ, ನಿರ್ದೇಶಕರಾದ ವಿ.ಜಿ.ಮೋಹನ್, ಎಸ್.ಶ್ರೇಯಸ್, ಕವನ್ ಇದ್ದರು.