ಮಡಿಕೇರಿ | ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ; ದಾಳಿ ವೇಳೆ ಪತ್ತೆಯಾದ ಚಿನ್ನವೆಷ್ಟು ಗೊತ್ತೇ!
admincoorgdaily
ಮಡಿಕೇರಿ : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಕೊಡಗು ಹಾಗೂ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಕೊಡಗು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಎಂ. ಗಿರೀಶ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆಸಿದರು.
ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ನಿರೀಕ್ಷಕಿ ವೀಣಾ ನಾಯಕ್ ಹಾಗೂ ಸಿಬ್ಬಂದಿಗಳು ಮಡಿಕೇರಿಯ ಲೋಕೋಪಯೋಗಿ ಇಲಾಖೆ ಕಚೇರಿ, ಗಿರೀಶ್ ಅವರ ಸರ್ಕಾರಿ ವಸತಿ ಹಾಗೂ ಮೈಸೂರಿನ ನಿವಾಸದಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಬೆಳಗ್ಗಿನಿಂದ ಸಂಜೆವರೆಗೆ ನಡೆದ ಶೋಧದಲ್ಲಿ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶೋಧದಲ್ಲಿ ಗಿರೀಶ್ ಅವರ ಬಳಿ ನಾಲ್ಕು ನಿವೇಶನ ಮತ್ತು ಒಂದು ವಾಸದ ಮನೆ ಸೇರಿದಂತೆ ಸುಮಾರು ₹1.89 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಜೊತೆಗೆ, ₹5.53 ಲಕ್ಷ ನಗದು, ₹1.81 ಕೋಟಿ ಮೌಲ್ಯದ ಚಿನ್ನಾಭರಣ, ₹9 ಲಕ್ಷ ಮೌಲ್ಯದ ವಾಹನ ಹಾಗೂ ₹40 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು, ಒಟ್ಟು ಆಸ್ತಿ ಮೌಲ್ಯ ₹4.26 ಕೋಟಿ ಎಂದು ತಿಳಿದು ಬಂದಿದೆ.
ಆದಾಯ ಮೂಲಕ್ಕೆ ಹೊಂದಿಕೆಯಾಗದ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.