ಮಡಿಕೇರಿ;ಬಿಲ್ಲವ ಸಮುದಾಯದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
ಮಡಿಕೇರಿ: ಕೊಡವ ಸಮಾಜ ಸಭಾಂಗಣದಲ್ಲಿ ಬಿಲ್ಲವ ಸಮುದಾಯದವರು ಆಯೋಜಿಸಿದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ ಹಾಗೂ ಮನರಂಜನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಕಾಂಗ್ರೆಸ್ ನಾಯಕರು ಹಾಗೂ ಬಿಲ್ಲವ ಸಮಾಜದ ಮುಖಂಡರಾದ ಅಪ್ರು ರವೀಂದ್ರರವರು ಶಾಸಕರನ್ನು ವೇದಿಕೆಯತ್ತ ಬರಮಾಡಿಕೊಂಡರು. ಇತ್ತೀಚೆಗೆ ಶಾಸಕರು ಬಿಲ್ಲವ ಸಮಾಜಕ್ಕೆ ಮಡಿಕೇರಿಯಲ್ಲಿ ಸರಕಾರದ ವತಿಯಿಂದ ಜಾಗ ಮಂಜೂರು ಮಾಡಿ ಕೊಟ್ಟಿರುವುದಕ್ಕೆ ಗೌರವಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾಜದವರಿಂದ ಗೌರವ ಸ್ವೀಕರಿಸಿ ಮಾತನಾಡಿದ ಶಾಸಕರು, ನಾಡು ಸುಭಿಕ್ಷೆ ಹಾಗೂ ಸಮೃದ್ಧಿ ಆಗಬೇಕೆಂದರೆ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾಡಿನ ಪ್ರತಿಯೊಂದು ಸಮುದಾಯದವರಿಗೆ ಅವರದೇ ಆದ ಜಾಗ ಇರುವ ಅವಶ್ಯಕತೆಯನ್ನು ತಾನು ಮನಗಂಡು ಬಿಲ್ಲವ ಸಮಾಜದವರ ಮನವಿಗೆ ಮನ್ನಣೆ ನೀಡಿ ಈ ಜಾಗವನ್ನು ಮಂಜೂರು ಮಾಡಿಸಿರುವುದಾಗಿ ಹೇಳಿದರು.
ಸಮಾಜದವರಿಗೆ ಶುಭ ಕೋರಿದ ಮಾನ್ಯ ಶಾಸಕರು ಮುಂದಿನ ದಿನಗಳಲ್ಲಿ ಇವರ ಕಾರ್ಯ ಚಟುವಟಿಕೆಗಳು ನಾಡಿನ ಏಳಿಗೆಗೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪರಮಾಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಬಿಲ್ಲವ ಸಮಾಜದ ಅಧ್ಯಕ್ಷರು ಶ್ರೀಮತಿ ಲೀಲಾವತಿ, ಕೆಪಿಸಿಸಿ ಸದಸ್ಯರು ರಮಾನಾಥ್ ಬೇಕಲ್, ಹರೀಶ್ ಕುಮಾರ್ ಹಾಗೂ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಸಮುದಾಯದವರು ಉಪಸ್ಥಿತರಿದ್ದರು.